ಅಡಕೆ ಮತ್ತು ವೀಳ್ಯದೆಲೆಯನ್ನು ಔಷಧ ಮತ್ತು ಮಾದಕ ಉತ್ತೇಜಕ ಪಟ್ಟಿಯಲ್ಲಿ ಸೇರಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಯ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಕೆಂಡ ಕಾರಿದ ಪ್ರಸಂಗ ವಿಧಾನ ಸಭೆಯಲ್ಲಿ ಶುಕ್ರವಾರ ನಡೆಯಿತು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಸಾಗರ ಶಾಸಕ ಹರತಾಳು ಹಾಲಪ್ಪ ಅವರು, ಕರ್ನಾಟಕ ಸರಕಾರದ ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ನಲ್ಲಿ ವೀಳ್ಯದೆಲೆ ಮತ್ತು ಅಡಿಕೆಯನ್ನು ಮಾದಕ ಉತ್ತೇಜಕ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ನೋಡಿರುವ ಅಡಕೆ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ. ಮಾರುಕಟ್ಟೆಯಲ್ಲಿ ಅಡಕೆ ಬೆಲೆಯೂ ಕಡಿಮೆಯಾಗುವ ಸಾಧ್ಯತೆಯಿದೆ. ಅಡಕೆ ಕೊನೆ ಕೊಯ್ಲಿನ ಸಂದರ್ಭವೇ ಪ್ರತಿವರ್ಷ ಏನಾದರೊಂದು ರಗಳೆ ಇರುತ್ತದೆ. ಅಡಕೆ ಮತ್ತು ವೀಳ್ಯದೆಲೆಯನ್ನು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯ ಭಾವನೆಯಿಂದ ಗೌರವಿಸಲಾಗುತ್ತದೆ. ಇಂತಹ ಹೊತ್ತಲ್ಲಿ ವೆಬ್‌ಸೈಟ್‌ನಲ್ಲಿ ಯಾಕೆ ಈ ಮಾಹಿತಿ ಇದೆ ಎಂಬುದೇ ಅರ್ಥವಾಗುತ್ತಿಲ್ಲ ಈ ವಿಷಯವನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೆ ಶಾಸಕರಾದ ಕುಮಾರಬಂಗಾರಪ್ಪ, ಆರಗ ಜ್ಞಾನೇಂದ್ರ, ಮಾಡಾಳು ವಿರೊಪಾಕ್ಷಪ್ಪ , ಎಂ.ಪಿ.ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದರು.
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಗೃಹ ಸಚಿವರಿಗೆ ಉತ್ತರ ನೀಡುವಂತೆ ಸೂಚಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ವೆಬ್ ಸೈಟ್‌ನಲ್ಲಿ ಬಂದ ಮಾಹಿತಿಗೆ ರೈತರು ಆತಂಕಪಡುವ ಅಗತ್ಯವಿಲ್ಲ. ಈ ಲೋಪ ಹೇಗಾಯಿತು ಎಂಬ ಬಗ್ಗೆ ಪರಿಶೀಲನೆ ಮಾಡುವುದಗಿ ಭರವಸೆ ನೀಡಿದರು.
previous post