ಸುಮ್ನಿರಲಾರ್‍ದೆ ಇರುವೆ ಬಿಟ್ಕಂಡ್ರು ……..
ಅದೇನೊ ಅಂತಾರಲ್ಲ, ಸುಮ್ನಿರಲಾರ್‍ದೆ ಇರುವೆ ಬಿಟ್ಕಂಡ್ರು ಅಂತ. ಹಂಗಿದ್ದೇ ಒಂದು ಪ್ರಕರಣ ಕಣ್ರಿ ಇದು. ಈ ಘಟ್ಟದ ಕೆಳಗಿನ ಎಲ್ಲ ತಕರಾಪಕರಾಗಳು ಘಟ್ಟದ ಮೇಲೂ ಬಂದಿವೆ. ಅಲ್ಲಿ ಭಾರೀ ಜನಪ್ರಿಯವಾಗಿರುವ ಕೋಳಿಅಂಕ ಶಿವಮೊಗ್ಗ ಜಿಲ್ಲೆಯಲ್ಲೂ ಒಂದು ಜೂಜಾಗಿ ಪರಿಣಿಸಿದೆ. ಸೋಮವಾರ ರಾತ್ರಿ ಕೋಣಂದೂರು ಸಮೀಪ ಕೋಳಿಅಂಕ ನಡೀತಿದೆ ಅಂತ ಯಾರೋ ಪೊಲೀಸರಿಗೆ ಹೇಳಿದ್ರು. ಶಿಕಾರಿ ಮಾಡೇ ಬಿಡನ ಅಂತ ಪೋಲಿಸರ ದಂಡು ದಾಳಿ ಮಾಡೇ ಬಿಡ್ತು. ಸುದ್ದಿ ಗೊತ್ತಾದುದ್ದೇ ತಡ ನಮ್ ಮಲ್ನಾಡಿನ ಕೋಳಿಕಾರರು ಗಿಡ ಬಿದ್ದು ಓಟ ಕಿತ್ರು. ಪೊಲೀಸರ ಕೈಗೆ ಪಣಕಟ್ಟಿದವರೂ ಸಿಕ್ಲ, ಫೈಟರ್ ಕೋಳೀನೂ ಸಿಕ್ಲ.
ಪೇಚಿಗೆ ಸಿಕ್ಕ ಅವರು, ಅಲ್ಲೇ ಇದ್ದ ಎಲ್ಲಾ ಬೈಕ್‌ಗಳನ್ನು ಟಾಟಾ ಏಸ್ ವಾಹನಕ್ಕೆ ತುಂಬಿ ಪೊಲೀಸ್ ಠಾಣೆಗೆ ರೈಟ್ ಅಂದಿದ್ದಾರೆ. ಕತ್ಲಲಲ್ಲಿ ಓವರ್ ಲೋಡ್ ಆಗಿ ಹೋದ ಆಟೊದಿಂದ ನಾಲ್ಕೈದು ಬೈಕ್ ಕೆಳಗೆ ಬಿದ್ದಿವೆ. ಪೆಟ್ರೋಲ್ ಸುರಿದು ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪುಣ್ಯಕ್ಕೆ ಆಟೊ ಮತ್ತು ಅದರಲ್ಲಿದ್ದ ಮತ್ತಷ್ಟು ಬೈಕಿಗೆ ಬೆಂಕಿ ತಾಗಲಿಲ್ಲ.
ಬೈಕ್ ಕಳೆದುಕೊಂಡವರ ಸ್ಥಿತಿಯೀಗ ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸಿದಂತಾಗಿದೆ. ಅತ್ತ ಜೂಜೂ ಗೆಲ್ನಿಲ್ಲ, ಇತ್ತ ಬೈಕೂ ಉಳಿನಿಲ್ಲ…. ಸುಮ್ನಿರಲಾರದೆ ಇರುವೆ ಬಿಟ್ಕೊಳೋದು ಅಂದ್ರೆ ಇದೇ ಇರಬೇಕಲ್ಲ ?
previous post