ಜಲಾಮೃತ ಯೋಜನೆಯಡಿ ಕೆರೆಗಳ ಹೂಳೆತ್ತುವಿಕೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೊದಲು ಕೆರೆ ಒತ್ತುವರಿಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಲಾಮೃತ ಹಾಗೂ ಕೆರೆ ಸಂಜೀವಿನಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು.
ಕೆರೆ ಹೂಳೆತ್ತುವ ಕಾರ್ಯ ಮಾಡುವ ಪೂರ್ವದಲ್ಲಿ ಒತ್ತುವರಿಯನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು ಹಾಗೂ ಹೊಸದಾಗಿ ಒತ್ತುವರಿ ಮಾಡಲು ಅವಕಾಶವಾಗದಂತೆ ಕಾಮಗಾರಿ ಅನುಷ್ಟಾನಗೊಳಿಸಬೇಕು ಎಂದು ಅವರು ಹೇಳಿದರು.
2020-21ನೇ ಸಾಲಿನಲ್ಲಿ ಯೋಜನೆಯಡಿ 1.20ಕೋಟಿ ರೂ. ವೆಚ್ಚದಲ್ಲಿ 24 ಬದಲಿ ಕೆರೆಗಳ ಹೂಳೆತ್ತುವ ಕಾಮಗಾರಿಗಳ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು. ಇದೇ ರೀತಿ 2019-20ನೇ ಸಾಲಿನಲ್ಲಿ ಉಳಿಕೆಯಾಗಿರುವ 1.42ಕೋಟಿ ರೂ. ಮೊತ್ತದಲ್ಲಿ ಸಾಗರ ವಿಭಾಗದಲ್ಲಿ 29 ಕೆರೆ ಹಾಗೂ ಶಿವಮೊಗ್ಗ ವಿಭಾಗದಲ್ಲಿ 92ಲಕ್ಷ ರೂ. ವೆಚ್ಚದಲ್ಲಿ ಒಂದು ಕೆರೆ ಕಾಮಗಾರಿ ಪ್ರಸ್ತಾವನೆಯನ್ನು ಅನುಮೋದನೆಗೆ ಸಲ್ಲಿಸಲು ನಿರ್ಧರಿಸಲಾಯಿತು.
ಸಾಗರ ವಿಭಾಗದಲ್ಲಿ ಯೋಜನೆಯಡಿ 15ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 14 ಕಾಮಗಾರಿಗಳು ಪೂರ್ಣಗೊಂಡಿವೆ. 3.59ಕೋಟಿ ರೂ. ಬಿಡುಗಡೆಯಾಗಿದ್ದು 3ಕೋಟಿ ರೂ. ವೆಚ್ಚವಾಗಿದೆ. ಶಿವಮೊಗ್ಗ ವಿಭಾಗದಲ್ಲಿ 16ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 14 ಕಾಮಗಾರಿಗಳು ಪೂರ್ಣಗೊಂಡಿವೆ. 1.60ಕೋಟಿ ರೂ. ಬಿಡುಗಡೆಯಾಗಿದ್ದು 1ಕೋಟಿ ರೂ. ವೆಚ್ಚ ಮಾಡಲಾಗಿದೆ. ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತಿಮ್ಮಾನಾಯ್ಕ ಕೆರೆ ಅಭಿವೃದ್ಧಿಗೆ ಅಂದಾಜು 22ಲಕ್ಷ ರೂ. ಪ್ರಸ್ತಾವನೆಯನ್ನು ಸಲ್ಲಿಸಲು ತೀರ್ಮಾನಿಸಲಾಯಿತು.
ಕೆರೆ ಸಂಜೀವಿನಿ ಯೋಜನೆಯಡಿ ಶಿವಮೊಗ್ಗ ಹಾಗೂ ಸಾಗರ ವಿಭಾಗಗಳಿಂದ 15.77 ಕೋಟಿ ರೂ. ವೆಚ್ಚದಲ್ಲಿ 267 ಕೆರೆಗಳ ಹೂಳೆತ್ತುವ ಕಾಮಗಾರಿಗಳ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಅವುಗಳ ಪೈಕಿ ಪ್ರತಿ ತಾಲೂಕಿನಲ್ಲಿ ತಲಾ 10ಕೆರೆಗಳಂತೆ 5.51ಕೋಟಿ ರೂ. ವೆಚ್ಚದಲ್ಲಿ 69 ಕೆರೆಗಳ ಹೂಳೆತ್ತುವ ಕಾಮಗಾರಿಗಳನ್ನು ಮೊದಲ ಹಂತದಲ್ಲಿ ಅನುಷ್ಟಾನಗೊಳಿಸಲು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, ಜಲಾಮೃತ ಯೋಜನೆಯಡಿ ಸಣ್ಣ ನೀರಾವರಿ ಕೆರೆಗಳು ಮತ್ತು ಸಾಂಪ್ರದಾಯಿಕ ಜಲಮೂಲಗಳಾದ ಕಲ್ಯಾಣಿ, ಕುಂಟೆ, ಗೋಕಟ್ಟೆ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಅಗತ್ಯವಿರುವ ಕಡೆಗಳಲ್ಲಿ ವೈಜ್ಞಾನಿಕಾಗಿ ಹೊಸದಾಗಿ ಜಲಮೂಲಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೇ ರೀತಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಬಾವಿ, ಕೊಳವೆಬಾವಿ ಸುತ್ತ ಮಳೆ ನೀರು ಮರುಪೂರಣ ಘಟಕಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಂಗಸ್ವಾಮಿ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.