ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ತವರು ಪ್ರೇಮ ಮುಂದುವರಿಸಿದ್ದು, ಕೊರೊನ ಸಂಕಷ್ಟದಲ್ಲೂ ಒಂದಷ್ಟು ಯೋಜನೆ ನೀಡಿದ್ದಾರೆ.
ಶಿವಮೊಗ್ಗ ಆಯುರ್ವೇದ ಕಾಲೇಜನ್ನು ಆಯುಷ್ ವಿಶ್ವವಿದ್ಯಾಲಯವನ್ನಾಗಿ ಉತ್ತನ ದರ್ಜೆಗೇರಿಸಲಾಗಿದೆ. ಇದರಿಂದ ವಿವಿಗಾಗಿ ಸೋಗಾನೆ ಬಳಿ ಈಗಾಗಲೇ ನೂರು ಎಕರೆ ಜಾಗ ಮೀಸಲಿರಿಸಿದ್ದು, ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ಆಯುರ್ವೇದ ವಿಶ್ವವಿದ್ಯಾಲಯವೂ ಆದರೆ ಶಿವಮೊಗ್ಗ ಜಿಲ್ಲೆಗೆ ಕಿರೀಟಪ್ರಾಯವಾಗಲಿದೆ.
ಕ್ಯಾನ್ಸರ್ ಆಸ್ಪತ್ರೆ:
ಶಿವಮೊಗ್ಗದಲ್ಲಿ ಕಿದ್ವಾಯಿ ಮಾದರಿಯಲ್ಲಿ ಹೊಸ ಕ್ಯಾನ್ಸರ್ ಆಸ್ಪತ್ರೆ ತೆರೆಯಲು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು, ಇದಕ್ಕಾಗಿ ಅನುದಾನ ಘೋಷಣೆ ಮಾಡಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಹಾಗೂ ಬೆಂಗಳೂರು ಮತ್ತು ಮಣಿಪಾಲಿಗೆ ಹೋಗುತ್ತಿದ್ದ ಮಲೆನಾಡಿನ ಬಡಜನರಿಗೆ ಇದರಿಂದ ಅನುಕೂಲವಾಗಲಿದೆ. ಪಶುವೈದ್ಯಕೀಯ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರಕ್ಕೆ ಸ್ಥಾಪನೆ ಮಾಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಇದಕ್ಕಾಗಿ 2 ಕೋಟಿ ಅನುದಾನ ಮೀಸಲಿಡಲಾಗಿದೆ. ಕಾಲುಸಂಕಗಳ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಇದರಿಂದ ಮಲೆನಾಡಿನಲ್ಲಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ.
ವಿಮಾನ ನಿಲ್ದಾಣಕ್ಕೆ ಅನುದಾನ:
ಶಿವಮೊಗ್ಗದ ಮಹತ್ವಾಕಾಂಕ್ಷಿ ವಿಮಾನ ನಿಲ್ದಾಣ ಪೂರ್ಣಗೊಳಿಸಲು ಅನುದಾನ ಘೋಷಿಸಿದ್ದು, ಕಾಮಗಾರಿ ಭರದಿಂದ ಸಾಗಲು ಯಾವುದೇ ಅಡ್ಡಿ ಆತಂಕಗಳಿಲ್ಲ ಎಂಬುದನ್ನು ಮುಖ್ಯಮಂತ್ರಿ ಸಾರಿದಂತಾಗಿದೆ. ಕಾರ್ಮಿಕರ ವಸತಿಗೆ ತಾತ್ಕಾಲಿಕ ವಸತಿಗೃಹ, ಶಿವಮೊಗ್ಗ-ಶಿಕಾರಿಪುರ-ಶಿರಾಳಕೊಪ್ಪದ ರಸ್ತೆಗೆ ವೈಜ್ಞಾನಿಕ ಸಂಚಾರ ನಿರ್ವಹಣೆ ವ್ಯವಸ್ಥೆಗೆ ಅನುದಾನ ನೀಡಲಾಗಿದೆ.
ಸಾಹಿತಿಗಳು ಕಲಿತ ಶಾಲೆ ಅಭಿವೃದ್ಧಿ:
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಓದಿದ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸಲು ಸರಕಾರ ಮುಂದಾಗಿದ್ದು, ಬಜೆಟ್‌ನಲ್ಲಿ ಈ ಯೋಜನೆಯೂ ಸೇರಿರುವುದರಿಂದ ಶಿವಮೊಗ್ಗದಲ್ಲಿ ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಇರುವುದರಿಂದ ಈ ಯೋಜನೆಯಡಿಯಲ್ಲಿಯೂ ಶಿವಮೊಗ್ಗ ಜಿಲ್ಲೆಗೆ ಅನುದಾನ ಸಿಗಲಿದೆ.
ಅಡಕೆ ಸಂಶೋಧನೆಗೆ 25 ಕೋಟಿ
ಅಡಕೆ ಬೆಳೆಗಾರರ ಬೆನ್ನಿಗೆ ಸರಕಾರ ನಿಂತಿದ್ದು, ಮಲೆನಾಡಿನ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ ಹಳದಿ ಎಲೆ ರೋಗ ನಿಯಂತ್ರಣ ಹಾಗೂ ಪರ್‍ಯಾಯ ಬೆಳೆ ಬಗ್ಗೆ ಗಮನ ಹರಿಸಲು ಅಡಿಕೆ ಟಾಸ್ಕ್ ಫೋರ್ಸ್‌ಗೆ 25 ಕೋಟಿ ರೂ.ಗಳ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಬೆಳೆಗೆ ಬಾಧಿಸುವ ಹಳದಿ ಎಲೆ ರೋಗದ ಕುರಿತಾದ ಸಂಶೋಧನೆಗೆ ಇದರಿಂದ ಅನುಕೂಲವಾಗುವ ನಿರೀಕ್ಷೆ ಹೊಂದಲಾಗಿದೆ
ಸಮ ಸಮಾಜದ ಆಶಯ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಸಮಸಮಾಜದ ಆಶಯ ಹೊಂದಿದೆ. ಎಲ್ಲಾ ವರ್ಗದವರ ಹಿತವನ್ನೂ ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡಿಸಲಾಗಿದೆ. ಮಹಿಳಾ ಸಶಕ್ತೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮಹಿಳಾ ಉದ್ಯಮಿಗಳಿಗೆ ಸಾಲ ಸೌಲಭ್ಯ, ಎಪಿಎಂಸಿಯಲ್ಲಿ ಶೇ.10 ಮಳಿಗೆ ಮೀಸಲಿಡುವಂತಹ ಜನಪರ ಯೋಜನೆಗಳಿಗಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ
-ಬಿ.ವೈ.ರಾಘವೇಂದ್ರ ,ಸಂಸದ