ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಮಾಜಿ ಶಾಸಕ ಮಧುಬಂಗಾರಪ್ಪ ಅವರು ಕಾಂಗ್ರೆಸ್ ಸೇರುವ ನಿರ್ಧಾರ ಅಂತಿಮವಾಗಿದ್ದು, ಗುರುವಾರ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬೇಟಿ ಮಾಡಿ ಈ ಸಂಬಂಧ ಚರ್ಚೆ ನಡೆಸಲಿದ್ದಾರೆ.
ಜೆಡಿಎಸ್‌ನಿಂದ ಮಾನಸಿಕವಾಗಿ ದೂರವಾಗಿರುವ ಮಧುಬಂಗಾರಪ್ಪ ಕಾಂಗ್ರೆಸ್ ಸೇರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತಿತ್ತು. ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡ ಮಧು ಅವರು ಶೀಘ್ರ ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು ನೀಡಿದ್ದರು. ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಮಾಡಿ ಕಾಂಗ್ರೆಸ್ ಸೇರುವ ಉದ್ದೇಶ ಮಧುಬಂಗಾರಪ್ಪ ಮತ್ತವರ ಬೆಂಬಲಿಗರ ಇರಾದೆಯಾಗಿದೆ. ಈ ಕಾರಣದಿಂದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆ ದಿನಾಂಕವನ್ನು ಪಡೆಯಲಿದ್ದಾರೆ ಎನ್ನಲಾಗಿದೆ.
ಡಿಕೆಶಿ ಆಶಯ:
ಭದ್ರಾವತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಶಿವಮೊಗ್ಗದಲ್ಲಿ ಮಾ.೧೩ ರಂದು ಶಿವಮೊಗ್ಗ ಚಲೊ ಕಾರ್ಯಕ್ರಮವನ್ನು ಕಾಂಗ್ರೆಸ್ ಆಯೋಜಿಸಿದೆ. ಸೈನ್ಸ್ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ಪಕ್ಷ ಉದ್ದೇಶಿಸಿದೆ. ಅಂದು ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್, ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕರು ಭಾಗವಹಿಸುವರು. ಆ ದಿನದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂಬ ಸಲಹೆಯನ್ನು ಮಧುಬಂಗಾರಪ್ಪ ಅವರಿಗೆ ಕೆಪಿಸಿಸಿ ಸಾರಥಿ ಡಿಕೆಶಿ ನೀಡಿದ್ದಾರೆ. ಆದರೆ ಅಧಿಕೃತವಾಗಿ ಪಕ್ಷ ಸೇರದೆ ಪ್ರತಿಭಟನೆಯಲ್ಲಿ ಭಾಗಿಯಾಗುವುದು ಬೇಡ ಎಂಬ ಅಭಿಪ್ರಾಯ ಮಧು ಬೆಂಬಲಿಗರದ್ದು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಮಧುಬಂಗಾರಪ್ಪ ಅವರ ಸಿದ್ದರಾಮಯ್ಯ ಭೇಟಿ ಮಹತ್ವ ಪಡೆದುಕೊಂಡಿದೆ. ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದರೆ ಶಿವಮೊಗ್ಗದಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಶಕ್ತಿ ಬರಲಿದೆ ಎಂಬ ಅಭಿಪ್ರಾಯ ಕಾರ್ಯಕರ್ತರು ಹಾಗೂ ಮುಖಂಡರಲ್ಲಿದ್ದು, ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಮಧುಬಂಗಾರಪ್ಪ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.
previous post