ರೈತ ಮಹಾ ಪಂಚಾಯತ್‍ಗೆ ವ್ಯಾಪಕ ಬೆಂಬಲ
ಸಾಗರಕ್ಕೆ ನೂರಾರು ನದಿಗಳು ಸೇರುವಂತೆ ಶಿವಮೊಗ್ಗದಲ್ಲಿ ಶನಿವಾರ ನಡೆಯಲಿರುವ ರೈತ ಮಹಾಪಂಚಾಯತ್‍ಗೆ ನೂರಾರು ಸಂಘಟನೆಗಳು ಬೆಂಬಲಿಸಿವೆ. ಚಳವಳಿಗಳ ತವರೂರು ಶಿವಮೊಗ್ಗ ರೈತ ಮಹಾಪಂಚಾಯತ್‍ನಿಂದಾಗಿ ಮತ್ತೊಮ್ಮೆ ದೇಶದಲ್ಲಿ ಸುದ್ದಿಯಾಗುತ್ತಿದೆ. ಕೇಂದ್ರ ಸರಕಾರದ ರೈತ ವಿರೋಧಿ ಕಾಯಿದೆಗಳನ್ನು ವಿರೊಧಿಸಿ ಉತ್ತರ ಭಾರತಕ್ಕೆ ಸೀಮಿತವಾಗಿದ್ದ ರೈತ ಮಹಾಪಂಚಾಯತ್ ಶಿವಮೊಗ್ಗದ ಮೂಲಕ ದಕ್ಷಿಣಭಾರತಕ್ಕೂ ಅಡಿಯಿಡುತ್ತಿದೆ.
ವಿವಾದಿತ ಕೃಷಿ ಕಾಯಿದೆಗಳು ದೇಶಕ್ಕೇ ಅನ್ವಯಿಸುವುದರಿಂದ ಮಲೆನಾಡಿನಲ್ಲಿಯೂ ಸಹಜವಾಗಿಯೇ ಆತಂಕವಿದೆ. ರೈತ ಮಹಾಪಂಚಾಯತ್ ಮೂಲಕ ಸರಕಾರಕ್ಕೆ ಸಂದೇಶ ಕೊಡುವ ಉದ್ದೇಶದಿಂದ ನಡೆಯುತ್ತಿರುವ ರೈತರ ಪ್ರತಿಭಟನಾ ಸಮಾವೇಶಕ್ಕೆ ಮಲೆನಾಡಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಿಜೆಪಿಯೇತರ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದರಿಂದ ಅಯಾ ಪಕ್ಷಗಳ ಕಾರ್ಯಕರ್ತರು ಪಂಚಾಯತ್ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಕರ್ನಾಟಕ ಐಕ್ಯ ಹೋರಾಟ ಸಮಿತಿ, ರಾಜ್ಯ ರೈತ ಸಂಘ, ಸಂಯುಕ್ತ ಕಿಸಾನ್ ಮೋರ್ಚಾಗಳು ಮುಂಚೂಣಿಯಲ್ಲಿದ್ದರೂ ಈ ಮಹಾ ಪಂಚಾಯತ್ ಒಂದು ಜನರ ಹೋರಾಟವಾಗಿ ರೂಪುಗೊಂಡಿದೆ.
ಹಳ್ಳಿಹಳ್ಳಿಗೂ ತಲುಪಿದ ಪಂಚಾಯತ್
ದೆಹಲಿಯಲ್ಲಿ ರೈತರನ್ನು ಸರಕಾರ ನಡೆಸಿಕೊಳಳುತ್ತಿರುವುದನ್ನು ನೋಡುತ್ತಿರುವ ರೈತ ಸಮುದಾಯ ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗಿಯಾಗಲು ನಿಶ್ಚಯಿಸಿದ್ದಾರೆ. ಸಂಘಟನೆಗಳ ಕಾರ್ಯಕರ್ತರು ಕೂಡಾ ಪ್ರತಿ ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡಿದ್ದಾರೆ. ಶಿವಮೊಗ್ಗದ ಈ ಹೋರಾಟಕ್ಕೆ ಅಕ್ಕಪಕ್ಕದ ಜಿಲ್ಲೆಗಳ ರೈತರು ಭಾಗವಹಿಸಲಿದ್ದಾರೆ.
ರೈತನಾಯಕರ ಆಗಮನ
ದಿಲ್ಲಿ ರೈತ ಹೋರಾಟದಲ್ಲಿ ನಾಯಕರಾದ ರಾಕೇಶ್‍ಸಿಂಗ್ ಟಿಕಾಯತ್ , ಡಾ.ದರ್ಶನ್, ಯಧುವೀರ ಸಿಂಗ್, ಯೋಗೇಂದ್ರ ಯಾದವ್ ಸೇರಿದಂತೆ ಹಲವು ನಾಯಕರು ಪಂಚಾಯತ್‍ನಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಬರಲಿರುವ ರೈತ ನಾಯಕರಿಗೆ ಹಾದಿಯುದ್ದಕ್ಕೂ ಸ್ವಾಗತ ಕೋರುವ ವ್ಯವಸ್ಥೆ ಇದೆ. ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಸಂಜೆ 4 ಕ್ಕೆ ಆರಂಭವಾಗಲಿದೆ. ಶಿವಮೊಗ್ಗ ಜಿಲ್ಲೆಯ ನಾಯಕರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾರ್, ಕಡಿದಾಳು ಶಾಮಣ್ಣ, ಬಿ.ಕೆ.ಸಂಗಮೇಶ್, ಮಧುಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ, ಆರ್.ಎಂ.ಮಂಜುನಾಥ್ ಗೌಡ, ಎಂ.ಶ್ರೀಕಾಂತ್, ಕೆ.ಟಿ.ಗಂಗಾಧರ್, ಎಚ್.ಆರ್.ಬಸವರಾಜಪ್ಪ, ಕೆ.ಪಿ.ಶ್ರೀಪಾಲ್, ಕೆ.ಎಲ್.ಅಶೋಕ್ .ಎಂ.ಗುರುಮೂರ್ತಿ ಸೇರಿದಂತೆ ಅನೇಕ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅನ್ನದಾತರ ಮಹಾಪಂಚಾಯತ್‍ನಲ್ಲಿ ಭಾಗವಹಿಸುವ ರೈತ ಬಂಧುಗಳಿಗೆ ನೀರು,ಮಜ್ಜಿಗೆ ಪಾಕೇಟ್ ಹಾಗೂ ಕಲ್ಲಂಗಡಿ ಹಣ್ಣುಗಳನ್ನು ನೀಡುವುದಾಗಿ ದಾನಿಗಳು ಹೇಳಿದ್ದಾರೆ. ಹಲವು ಹೋರಾಟಗಳಿಗೆ ಜನ್ಮಭೂಮಿಯಾದ ಶಿವಮೊಗ್ಗದ ರೈತ ಮಹಾ ಪಂಚಾಯತ್ ಒಂದು ಐತಿಹಾಸಿಕ ಹೋರಾಟವಾಗಲಿದೆ ಎನ್ನುವುದಂತೂ ಸತ್ಯ.
ಅನ್ನದಾತರ ಋಣ ತೀರಿಸಲು ಎಲ್ಲರೂ ಬನ್ನಿ, ರೈತವಿರೋಧಿ ಕಾಯಿದೆಗಳನ್ನು ರದ್ದು ಮಾಡುವತನಕ ಹೋರಾಟ ಮುಂದುವರಿಸೋಣ. ದೇಶದ ರೈತ ನಾಯರು ಬರುತ್ತಾರೆ. ನಾನು ಬರುತ್ತೇನೆ ನೀವು ಬನ್ನಿ. ಕೋವಿಡ್ ನಿಯಮಾವಳಿಗಳನ್ನು ಖಡ್ಡಾಯವಾಗಿ ಪಾಲಿಸಿ
ಮಧುಬಂಗಾರಪ್ಪ, ಮಾಜಿ ಶಾಸಕ, ಸೊರಬ
ರೈತನಿರದಿದ್ದರೆ ಅನ್ನವೇ ಇಲ್ಲ. ಇಂತಹ ಅನ್ನ ನೀಡುವ ರೈತರ ಮಹಾಪಂಚಾಯತ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ. ಇದು ಜನರ ಹೋರಾಟ, ನಮ್ಮ ಹಕ್ಕುಗಳನ್ನು ಶಾಂತರೀತಿಯಲ್ಲಿಯೇ ಕೇಳೋಣ. ಮಲೆನಾಡಿನ ಜನ ತಮ್ಮಲ್ಲಿನ ಹೋರಾಟದ ಶಕ್ತಿ ತೋರಿಸಲು ಇದೊಂದು ಅವಕಾಶ ಬನ್ನಿ
ಎಂ.ಶ್ರೀಕಾಂತ್, ಮಹಾಪಂಚಾಯತ್ ಸಂಘಟಕ, ಜೆಡಿಎಸ್ ಮುಖಂಡ.
ಕೇಂದ್ರದ ಕಾಯಿದೆಗಳು ರೈತರಿಗೆ ಮಾರಕವಾಗಿವೆ. ಶಿವಮೊಗ್ಗದಲಿ ನಡೆಯುವ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಅವುಗಳನ್ನು ವಿರೋಧಿಸೋಣ. ಮಲೆನಾಡಿನ ರೈತರ ತಮ್ಮಲ್ಲಿನ ಶಕ್ತಿಯನ್ನುತೋರಿಸಬೇಕು.ಆ ಮೂಲಕ ಸರಕಾರಕ್ಕೆ ಸಂದೇಶ ನೀಡಬೇಕು ಬನ್ನಿ ಭಾಗವಹಿಸಿ
ಆರ್.ಎಂ.ಮಂಜುನಾಥ್ ಗೌಡ, ಹಿರಿಯ ಸಹಕಾರಿ, ರೈತ ನಾಯಕ
ಇದೊಂದು ಎರಡನೇ ಸ್ವತಂತ್ರ ಸಂಗ್ರಾಮ. ಮಲೆನಾಡಿನ ಸಮಸ್ಯೆಗಳ ಪರಿಹಾರಕ್ಕೆ ಒಂದು ದಾರಿ ಕಂಡುಕೊಳ್ಳುವ ಮಾರ್ಗ. ಕೃಷಿ ಬಿಕ್ಕಟ್ಟುಗಳ ಬಗ್ಗೆ ಚಿಂತನ ಮಂಥನ ನಡೆಯುವ ಈ ಸಮಾವೇಶಕ್ಕೆ ಯುವಕರು, ರೈತರ ಮಕ್ಕಳು ಹಾಗೂ ಅನ್ನದಾತರ ಪರ ಕಾಳಜಿಉಳ್ಳ ಎಲ್ಲರೂ ಭಾಗವಹಿಸಿ
ಕೆ.ಎಲ್. ಅಶೋಕ್, ಮಹಾಪಂಚಾಯತ್ , ಐಕ್ಯಹೋರಾಟ ಸಮಿತಿ.
ಚಳವಳಿಯ ನೆಲದಲ್ಲಿ ಮಹಾಪಂಚಾಯತ್ ಒಂದು ಹೆಜ್ಜೆಗುರುತು. ಸ್ವಯಂ ಪ್ರೇರಣೆಯಿಂದ ಜನರು ಬಂದು ತಮ್ಮ ಹೋರಾಟದ ಕಿಚ್ಚು ತೋರಿಸುತ್ತಾರೆ. ಸರಕಾರಗಳು ರೈತರನ್ನು ನಾಶ ಮಾಡುತ್ತಾ ಹೋದರೆ ಮುಂದೆ ಕೃಷಿ ಸಂಸ್ಕೃತಿಯೇ ಇಲ್ಲವಾಗುತ್ತದೆ. ಈ ಬಗ್ಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಸಮಾವೇಶಕ್ಕೆ ರೈತ ಬಾಂದವರು ಬರಬೇಕು-
ಕೆ.ಟಿ.ಗಂಗಾಧರ್, ರೈತ ನಾಯಕ
ರೈತರ ಹೋರಾಟ ಇಂದು ದೇಶವ್ಯಾಪಿಯಾಗಿದೆ. ಶಿವಮೊಗ್ಗದ ಚಳವಳಿ ಎಲ್ಲರ ಚಳವಳಿಯಾಗಿದೆ. ಸಾಹಿತಿಗಳು, ಹೋರಾಟಗಾರರು, ದಲಿತರು, ಕಾರ್ಮಿಕರು ಹಾಗೂ ಸಾಮಾನ್ಯ ಜನರಿಂದ ಈ ಹೋರಾಟಕ್ಕೆ ಬಲ ಬಂದಿದೆ. ನಮ್ಮ ಹಕ್ಕುಗಳಿಗಾಗಿ ಮಾಡುತ್ತಿರುವ ಈ ಹೋರಾಟಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು
ಎಚ್.ಆರ್.ಬಸವರಾಜಪ್ಪ , ರೈತ ನಾಯಕ