Malenadu Mirror
ಮಲೆನಾಡು ಸ್ಪೆಷಲ್ ರಾಜ್ಯ ಶಿವಮೊಗ್ಗ

ಶಿವಮೊಗ್ಗ ಎಂಬ ಚಳವಳಿಗಳ ಬೀಜದ ಹೊಲ

ಶಿವಮೊಗ್ಗ ಎಂದರೆ ಹೋರಾಟಗಳ ಬೀಜದ ಹೊಲವಿದ್ದಂತೆ. ಇಲ್ಲಿ ಮೊಳೆತ ಚಳವಳಿಗಳು ಮುಂದೆ ಟಿಸಿಲೊಡೆದು ಜಾಗತಿಕ ಮನ್ನಣೆ ಪಡೆದಿವೆ. ಹಾಗೇ ನೋಡಿದರೆ ಈ ಜಿಲ್ಲೆಯ ಮಣ್ಣಿನಲ್ಲಿ ಹನ್ನೆರಡನೆಯ ಶತಮಾನದಲ್ಲಿಯೇ ಪ್ರತಿಭಟನೆಯ ಪರ್ವ ಆರಂಭವಾಗಿದೆ. ಕಲ್ಯಾಣ ಕ್ರಾಂತ್ರಿಯ ಮೇರು ವ್ಯಕ್ತಿಗಳಾದ ಅಲ್ಲಮ ಪ್ರಭು ಹಾಗೂ ಅಕ್ಕಮಹಾದೇವಿ ಶಿವಮೊಗ್ಗದ ಮಣ್ಣಿನ ಜೀವಸತ್ವಗಳು. ಜಗಜ್ಯೋತಿ ಬಸವಣ್ಣನ ಅನುಭವ ಮಂಟಪದ ಆಧಾರ ಸ್ಥಂಬಗಳಾಗಿದ್ದ ಅಕ್ಕ ಮತ್ತು ಅಲ್ಲಮನ ಕಾಲದಲ್ಲಿಯೇ ಇಲ್ಲಿ ಮಹಾಚಳವಳಿಗೆ ನಾಂದಿ ಆಗಿತ್ತು. ಈ ಹೋರಾಟದ ಹೊಲದಲ್ಲಿ ಹುಟ್ಟಿದ ಚಿಗುರು ಹರೆಯಾಗಿ ದಶದಿಕ್ಕುಗಳಿಗೂ ವ್ಯಾಪಿಸುತ್ತಾ ಮತ್ತೆ ಮತ್ತೆ ಮರುಹುಟ್ಟು ಪಡೆಯುತ್ತಿರುವುದನ್ನು ಇತಿಹಾಸವೇ ಹೇಳುತ್ತದೆ.
ವಚನಚಳವಳಿಯಲ್ಲಿ ಶಿವಮೊಗ್ಗದ ಶಿವಶರಣರ ದೊಡ್ಡ ಬಳಗವೇ ಭಾಗಿಯಾಗಿತ್ತು. ಅವರ ಒಂದೊಂದು ವಚನಗಳಿಗೂ ಬಾಂಬಿನ ಬಲವಿತ್ತು. ಮುಕ್ತಾಯಕ್ಕ, ಶಿವನಾಗಮ್ಮ, ಇಕ್ಕದ ಮಾರಯ್ಯ,ಕೊಡದ ಮಾರಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕವ್ವ, ಗೊಗ್ಗೆವ್ವ ಹೀಗೆ ಹೋರಾಟಗಾರರ ಸಾಲೇ ಇದೆ. ಈ ಜಗ್ಗತ್ತಿಗೇ ಮಾದರಿಯಾದ ವಚನ ಚಳವಳಿಗೆ ಶಿವಮೊಗ್ಗದ ಕೊಡುಗೆ ದೊಡ್ಡದೇ ಇದೆ.

ಕಾಗೋಡು ಕಿಡಿ

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾತ್ರ ಶತ್ರುಗಳಾಗಿದ್ದರು ಅವರ ವಿರುದ್ಧ ಹೋರಾಡಿದ ದೇಶದಲ್ಲಿ ಆ ಬಳಿಕ ಆರಂಭವಾಗಿದ್ದು, ಒಳಗಿನ ಪ್ರಭುತ್ವದ ವಿರುದ್ಧದ ಹೋರಾಟ. ಇಂತಹ ಸಾಮಾಜಿಕ ಅಸಮತೋಲನದ ವಿರುದ್ಧ ಸೆಟೆದು ನಿಂತದ್ದರ ಫಲವೇ ಐತಿಹಾಸಿಕ ಕಾಗೋಡು ಚಳವಳಿ. ಭೂಮಾಲೀಕರು ಗೇಣಿದಾರರಿಗೆ ಮಾಡುತ್ತಿದ್ದ ಶೋಷಣೆಯನ್ನು ಪ್ರಶ್ನಿಸಿದ ಹೋರಾಟ ಮುಂದೆ ರಾಜ್ಯ ಮಾತ್ರವಲ್ಲದೆ ದೇಶ ಮಟ್ಟದಲ್ಲಿಯೂ ಬದಲಾವಣೆ ಮತ್ತು ಐತಿಹಾಸಿಕ ಕಾಯಿದೆಗಳು ಬರಲು ಕಾರಣವಾಯಿತು.
ಮಾಲೀಕರ ಹೊಲದಲ್ಲಿ ಗೇಣಿದಾರರು ಹಗಲಿರಳೂ ಗೇಯ್ದರೂ ಸಾಕಾಗುತ್ತಿರಲಿಲ್ಲ. ಅತೀವೃಷ್ಟಿ, ಅನಾವೃಷ್ಟಿ ಏನೇ ಇದ್ದರೂ ಶ್ರಮಕ್ಕೆ ಬೆಲೆ ಕೊಡದ ಭೂಮಾಲೀಕರಿಗೆ ತಮ್ಮ ಪಣತ ತುಂಬಿಕೊಳ್ಳುವ ದಾಹ ಮಾತ್ರ ಇತ್ತು. ಉದ್ರಿ ದುಡಿಮೆಯ ಜತೆ ಗೇಣಿ ಭತ್ತ ಅಳೆಯುವ ಕೊಳಗದ ಗಾತ್ರ ಹಿಗ್ಗಿದ್ದರಿಂದಲೇ ಹೋರಾಟದ ಕಿಡಿ ಹೊತ್ತಿದ್ದು. ಭತ್ತ ಅಳತೆಯ ಮಾಪನದ ವಿಚಾರಕ್ಕೆ ೧೯೪೮ ರಿಂದಲೇ ಇದ್ದ ಒಳಗುದಿ ೧೯೫೧ರಲ್ಲಿ ಸಾಗರ ತಾಲೂಕು ಕಾಗೋಡಿನಲ್ಲಿ ದೊಡ್ಡ ಹೋರಾಟಕ್ಕೆ ಮುನ್ನುಡಿಯಾಯಿತು.
ಪ್ರಾಥಮಿಕ ಹಂತದಲ್ಲಿ ಗೇಣಿದಾರರು ಮತ್ತು ಮಾಲಿಕರ ನಡುವೆ ಇದ್ದ ಸಾಮಾನ್ಯ ದಂಗೆ ಸ್ವರೂಪದ ಹೋರಾಟ, ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ ಅವರಂತಹವರು ಕಾಗೋಡು ಗ್ರಾಮಕ್ಕೆ ಬಂದು ನೇಗಿಲು ಮೇಳಿ ಮೇಲೆ ಕೈ ಇಟ್ಟ ಕ್ಷಣದಿಂದ ಸಣ್ಣ ಹೋರಾಟ ಮಹಾನದಿಯಾಯಿತು. ಮುಂದೆ ಭೂಸುಧಾರಣಾ ಕಾಯಿದೆ ಜಾರಿಯಾಗಿ ಉಳುವ ರೈತ ಹೊಲದ ಒಡೆಯನಾದ. ಈ ಕಾಯಿದೆ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ದೊಡ್ಡ ಪರಿಣಾಮ ಬೀರಿತ್ತು.ಇಂತಹ ಐತಿಹಾಸಿಕ ಹೋರಾಟ ಕಟ್ಟಿದ ಕೀರ್ತಿ ಕಾಗೋಡು ಚಳವಳಿ ರೂವಾರಿ ಎಚ್.ಗಣಪತಿಯಪ್ಪ ಮತ್ತವರ ಸಹವರ್ತಿಗಳಿಗೆ ಸಲ್ಲುತ್ತದೆ.

ದಲಿತ,ಬಂಡಾಯ

ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಈ ದೇಶದ ಧ್ವನಿಯಿಲ್ಲದವರಿಗೆ ಸ್ವಾಭಿಮಾನ ಕೊಟ್ಟಿದೆ. ಆದರೆ ನ್ಯಾಬದ್ಧವಾದ ಹಕ್ಕುಗಳನ್ನು ಪಡೆಯಲು ಕರ್ನಾಟಕ ರಾಜ್ಯದಲ್ಲಿ ಇದ್ದ ದಲಿತ ಚಳವಳಿಗಳಿಗೆ ಒಂದು ಸಾಂಸ್ಥಿಕ ಚೌಕಟ್ಟು ಸಿಕ್ಕಿದ್ದು ಶಿವಮೊಗ್ಗದಲ್ಲಿ. ದಲಿತರ ಅಸ್ಮಿತೆಗಾಗಿ ನಾಡಿನಾದ್ಯಂತ ಗಟ್ಟಿ ಧ್ವನಿ ನೀಡಿರುವ ದಲಿತ ಸಂಘರ್ಷ ಸಮಿತಿ ಜನ್ಮದಳೆದಿರುವುದು ಶಿವಮೊಗ್ಗದ ಮಣ್ಣಿನಲ್ಲಿ. ಭದ್ರಾವತಿಯಲ್ಲಿ ಅಧ್ಯಾಪಕರಾಗಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ ಚಿಂತನೆಯಲ್ಲಿ ಪಡುಮೂಡಿದ ಸಂಘಟನೆ ದಸಂಸ. ನಾಡಿನಾದ್ಯಂತ ದಲಿತರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪ್ರಬಲ ಅಸ್ತ್ರವಾಗಿ ಬೆಳೆದ ದಸಂಸ ಇಂದಿಗೂ ಶೋಷಿತರಿಗೆ ಧ್ವನಿಯಾಗಿದೆ. ಆ ಬಳಿಕ ಹುಟ್ಟಿಕೊಂಡ ಬಂಡಾಯ ಸಾಹಿತ್ಯ ಸಂಘಟನೆಯೂ ದಲಿತ ಚಳವಳಿಯ ಮುಂದುವರಿದ ಭಾಗವಾದರೂ ಅದಕ್ಕೊಂದು ಬೌದ್ಧಿಕ ವಿಸ್ತಾರವಿತ್ತು.


ಜಾಗತಿಕ ಮನ್ನಣೆ ಪಡೆದ ರೈತ ಚಳವಳಿ

ನಮ್ಮದೇ ಭೂ ಮಾಲಿಕರ ವಿರುದ್ಧ ಅಸ್ತಿತ್ವಕ್ಕಾಗಿ ಹೋರಾಡಿದ್ದು, ಕಾಗೋಡು ಚಳವಳಿಯಾದರೆ, ಕಾರ್ಪೋರೇಟ್ ಬಂಡವಾಳ ಶಾಹಿಗಳು ಮತ್ತು ಅವರ ಅಣತಿಯಂತೆ ಕುಣಿಯುತ್ತಿದ್ದ ಸರಕಾರಗಳ ಬೆನ್ನು ಮೂಳೆ ಬಗ್ಗಿಸುವಲ್ಲಿ ಯಶಸ್ವಿಯಾಗಿದ್ದ ರೈತ ಚಳವಳಿಯ ಕರ್ಮಭೂಮಿಯೂ ಶಿವಮೊಗ್ಗವೇ. ೧೯೮೦ ರಲ್ಲಿ ಬಿಜೆಪಿ ಮತ್ತು ರೈತ ಸಂಘ ಎರಡೂ ಜತೆಯಾಗಿಯೇ ಹುಟ್ಟಿಕೊಂಡಿವೆ. ಕಾಕತಾಳೀಯ ಎಂಬಂತೆ ಇಂದು ರೈತ ಸಂಕುಲಕ್ಕೆ ಮಾರಕವಾದ ಕಾಯಿದೆಗಳನ್ನು ಬಿಜೆಪಿ ಸರಕಾರ ತಂದಿದ್ದರೆ, ಅದರ ವಿರುದ್ಧ ಹೋರಾಟ ಮಾಡುತ್ತಿರುವುದು ರೈತ ಸಮೂಹ. ಶಿವಮೊಗ್ಗದಲ್ಲಿ ಎಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ್ ಅವರ ಸಾರಥ್ಯದಲ್ಲಿ ರೈತ ಚಳವಳಿ ಆರಂಭವಾಗಿತ್ತು. ನರಗುಂದ-ನವಲಗುಂದದಲ್ಲಿ ರೈತರ ಮೇಲೆ ನಡೆದ ದಬ್ಬಾಳಿಕೆಯ ವಿರುದ್ಧ ನಡೆಯುತ್ತಿದ್ದ ರೈತ ಚಳವಳಿಗೆ ಒಂದು ಸಂಘದ ಚೌಕಟ್ಟು ಶಿವಮೊಗ್ಗದಲ್ಲಿ ಸಿಕ್ಕಿತು. ಪ್ರೊ.ಎಂ.ಡಿ ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್,ಕಡಿದಾಳು ಶಾಮಣ್ಣ ಮುಂತಾದವರು ಸಂಘಕ್ಕೆ ತನ್ನದೇ ಆದ ಸಾಂವಿಧಾನಿಕ ಚೌಕಟ್ಟುಗಳನ್ನು ಹಾಕಿಕೊಟ್ಟಿದ್ದರು. ಇದರ ಫಲವಾಗಿ ತೀವ್ರಗತಿಯನ್ನು ಪಡೆದುಕೊಂಡ ಕರ್ನಾಟಕ ರಾಜ್ಯ ರೈತ ಸಂಘ ಆಳುವ ಸರಕಾರಗಳನ್ನು ಅಲುಗಾಡಿಸುವ ಮಟ್ಟಕ್ಕೆ ಬೆಳೆಯಿತು. ಮುಂದೆ ಸಂಘವು ಚುನಾವಣಾ ರಾಜಕಾರಣ ಪ್ರವೇಶ ಮಾಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬಾಗವಾಯಿತು.
ಕೃಷಿ ಕ್ಷೇತ್ರದ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶವಾದ ಮೇಲೆ ಅವುಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ಕಟ್ಟುವ ಮೂಲಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ರಾಜ್ಯ ಹಾಗೂ ದೇಶದಲ್ಲಿ ಸಹಸ್ರಾರು ರೈತ ಪರ ಹೋರಾಟಗಾರರು ಮತ್ತು ಚಿಂತಕರನ್ನು ಸಂಘಟಿಸಿದ್ದರು. ಅವರು ಕಾಲವಾದ ಬಳಿಕ ಕೆಲ ನಾಯಕರ ಸ್ವಾರ್ಥ ಸಾಧನೆ ಮತ್ತು ಜಾತಿ ರಾಜಕಾರಣದಿಂದಾಗಿ ರೈತ ಸಂಘದ ಚಳವಳಿ ಹಲವು ದಳಗಳಾಗಿತ್ತು.

ಮಹಾ ಪಂಚಾಯತ್ ಹೆಗ್ಗಳಿಕೆ


ದಶಕಗಳ ಕಾಲ ಒಡಕು ಧ್ವನಿಯಲ್ಲಿಯೇ ಕಾಲ ನೂಕುತ್ತಿದ್ದ ರಾಜ್ಯ ರೈತ ಸಂಘವನ್ನು ಒಂದುಗೂಡಿಸಿದ ಕೀರ್ತಿ ಶಿವಮೊಗ್ಗದಲ್ಲಿ ಮಾ.೨೦ ರಂದು ನಡೆಯುತ್ತಿರುವ ಮಹಾಪಂಚಾಯತ್‌ಗೆ ಸಲ್ಲುತ್ತದೆ. ಮಲೆನಾಡಿನಲ್ಲಿ ರೈತರ ಸಮಸೆಗಳನ್ನಿಟ್ಟುಕೊಂಡು ನಿರಂತರ ಹೋರಾಟ ನಡೆದಿದ್ದರೂ ರೈತ ಸಂಘದ ಎರಡೂ ಬಣಗಳೂ ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸುತ್ತಿದ್ದವು. ಇದೇ ರೀತಿ ಶಿವಮೊಗ್ಗದಲ್ಲಿ ವಿದಳಗಳಾಗಿದ್ದ ಪ್ರಗತಿಪರ ಸಂಘಟನೆಗಳನ್ನೂ ಒಂದು ಮಾಡುವಲ್ಲಿ ಮಹಾಪಂಚಾಯತ್ ಯಶಸ್ವಿಯಾಗಿದೆ. ಎರಡು ಬಣಗಳಾಗಿದ್ದ ದಲಿತ ಸಂಘರ್ಷ ಸಮಿತಿಯೂ ಅನ್ನದಾತರ ಅಸ್ತಿತ್ವದ ಹೋರಾಟವಾದ ರೈತ ಮಹಾಪಂಚಾಯತ್‌ಗೆ ಒಂದಾಗಿಯೇ ಕೈ ಜೋಡಿಸಿವೆ.

ಶ್ರೀಕಾಂತ್ ಸೂತ್ರಧಾರಿ


ಶಿವಮೊಗ್ಗದಲ್ಲಿ ರೈತ ಸಂಘದ ಇಬ್ಬಣಗಳು ಹಾಗೂ ದಲಿತ ಸಂಘರ್ಷ ಸಮಿತಿಯ ಹಲವು ಬಣಗಳು ತಮ್ಮ ವಿವಿಧ ಹೋರಾಟಗಳಿಗೆ ಜೆಡಿಎಸ್ ನಾಯಕ ಎಂ.ಶ್ರೀಕಾಂತ್ ಅವರನ್ನು ಸದಾ ಬಳಕೆ ಮಾಡಿಕೊಳ್ಳುತ್ತಲೇ ಬಂದಿದ್ದವು. ಶಿವಮೊಗ್ಗದ ಜನಪರ ಹೋರಾಟಗಳಿಗೆ ಶ್ರೀಕಾಂತ್ ಯಾವತ್ತೂ ಒಂದು ರೀತಿಯ ಆರ್ಥಿಕ ಶಕ್ತಿಯೇ ಆಗಿದ್ದರು. ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಎಲ್ಲ ಬಣಗಳ ರೈತ ನಾಯಕರು ಹಾಗೂ ಪ್ರಗತಿಪರ ಹೋರಾಟಗಾರರನ್ನು ಕರೆದುಕೊಂಡು ಹೋಗಿದ್ದ ಶ್ರೀಕಾಂತ್ ಅವರು, ಶಿವಮೊಗ್ಗದ ರೈತ ಮಹಾಪಂಚಾಯತ್‌ನ ರೂವಾರಿ ಎಂದರೆ ತಪ್ಪಾಗಲಾರದು. ಐತಿಹಾಸಿಕ ಹೋರಾಟದ ಸಂಘಟನೆಗೆ ಇಲ್ಲಿನ ಎಲ್ಲ ಬಣಗಳನ್ನು ಒಂದು ಗೂಡಿಸಿರುವ ಶ್ರೇಯ ಅವರಿಗೆ ಸಲ್ಲತ್ತದೆ.

ಗ್ರಾಮ ಮಟ್ಟದ ಸಂಪರ್ಕ


ಚಳವಳಿಗಳ ತವರು ಶಿವಮೊಗ್ಗದಲ್ಲಿ ನಡೆಯುತ್ತಿರುವ ರೈತ ಮಹಾ ಪಂಚಾಯತ್‌ಗೆ ರಾಕೇಶ್ ಸಿಂಗ್ ಟಿಕಾಯತ್,ಡಾ.ದರ್ಶನ್ ಪಾಲ್, ಯಧುವೀರ ಸಿಂಗ್ ಮತ್ತವರ ತಂಡ ಆಗಮಿಸುತ್ತಿದೆ. ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಈ ಮೊದಲ ಮಹಾಪಂಚಾಯತ್‌ಗೆ ಮಲೆನಾಡು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನ್ನದಾತರ ವಿರುದ್ಧವಾದ ಕಾಯಿದೆಗಳನ್ನು ತಂದಿರುವ ಕೇಂದ್ರ ಸರಕಾರಕ್ಕೆ ನಾಲ್ಕು ತಿಂಗಳಿಂದ ನಡೆಯುತ್ತಿರುವ ರೈತರ ಹೋರಾಟ ಲೆಕ್ಕಕ್ಕಿಲ್ಲ ಎಂಬ ಆಕ್ರೋಶ ಜನರಲ್ಲಿ ಮೂಡಿದೆ. ಬಿಜೆಪಿಯೇತರ ಎಲ್ಲಾ ಪಕ್ಷಗಳೂ ಮಹಾಪಂಚಾಯತ್‌ಗೆ ಬೆಂಬಲ ನೀಡಿರುವುದರಿಂದ ಈ ಹೋರಾಟವೂ ಐತಿಹಾಸಿಕ ಚಳವಳಿಗಳ ಸಾಲಿಗೆ ಸೇರಲಿದೆ. ಸಂಯುಕ್ತ ಕಿಸಾನ್ ಮೋರ್ಚಾ, ಐಕ್ಯ ಹೋರಾಟ ಸಮಿತಿ, ರಾಜ್ಯ ರೈತ ಸಂಘಟನೆ ಕಾರ್ಯಕರ್ತರು ಚಿಕ್ಕ ಹಳ್ಳಿಗಳನ್ನೂ ಬಿಡದೆ ರೈತರನ್ನು ತಲುಪಿದ್ದಾರೆ. ಕೇಂದ್ರ ಜಾರಿಗೆ ತಂದಿರುವ ಕಾಯಿದೆಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇತ್ತೀಚೆಗೆ ನಡೆದ ಹೋರಾಟಗಳಲ್ಲಿ ಈ ಮಟ್ಟಿನ ಐಕ್ಯತೆ ಕಂಡುಬಂದಿರಲಿಲ್ಲ. ಹೋರಾಟಗಳ ಬೀಜದ ಗದ್ದೆಯಲ್ಲಿ ಬಿತ್ತನೆಯಾಗಲಿರುವ ಈ ಹೋರಾಟವೂ ಮುಂದೆ ಹೆಮ್ಮರವಾಗಿ ಬೆಳೆಯುವ ಸಾಧ್ಯತೆಗಳಿವೆ.

Ad Widget

Related posts

ರಾಜ್ಯಪಾಲರ ಮಲ್ನಾಡ್ ಟೂರ್ ಹೇಗಿತ್ತು ಗೊತ್ತಾ ? ಮಳೆನಾಡಿನ ಸಿರಿ ಸವಿದ ಥಾವರ್‌ಚಂದ್ ಗೆಹ್ಲೋಟ್

Malenadu Mirror Desk

ಸಿಗಂದೂರಲ್ಲಿ ನವರಾತ್ರಿ ಉತ್ಸವ ಆರಂಭ ಶಿವಗಿರಿಯ ಸತ್ಯಾನಂದ ತೀರ್ಥರಿಂದ ಉತ್ಸವಕ್ಕೆ ಚಾಲನೆ

Malenadu Mirror Desk

ಕೊರೊನ ಏರಿಕೆ, 1 ಸಾವು, 572 ಸೋಂಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.