ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಹಾಗೂ ಪಕ್ಷದ ಹೈಕಮಾಂಡ್‍ಗೆ ಸಚಿವ ಕೆ.ಎಸ್.ಈಶ್ವರಪ್ಪ ಬರೆದಿರುವ ಪತ್ರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಆಡಳಿತವನ್ನು ಈಶ್ವರಪ್ಪ ಬರೆದಿರುವ ಪತ್ರ ಸಾಕ್ಷೀಕರಿಸುತ್ತಿದೆ ಎಂದು ಆರೋಪ ಮಾಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು, ನಾವು ಇಷ್ಟು ಹೇಳುತ್ತಿರುವುದನ್ನೇ ಈಗ ಈಶ್ವರಪ್ಪ ಹೇಳಿದ್ದಾರೆ. ಸರಕಾರದ ಅವ್ಯವಹಾರಕ್ಕೆ ಸಂಪುಟ ದರ್ಜೆ ಸಚಿವರೇ ಸಾಕ್ಷಿ ನೀಡಿದ್ದಾರೆ. ರಾಜ್ಯಪಾಲರು ಮುಖ್ಯಮಂತ್ರಿಯನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕೆಂದು ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈಶ್ವರಪ್ಪ ಇದೇ ಮೊದಲ ಬಾರಿ ಒಂದು ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಹೇಳಿರುವ ಸಿದ್ದರಾಮಯ್ಯ ಅವರು, ರಾಜ್ಯಸರಕಾರದ ಖಜಾನೆ ಖಾಲಿಯಾಗಿರುವುದು ಕೊರೊನ ವೈರಸ್‍ನಿಂದಲ್ಲ ಬದಲಾಗಿ ಮುಖ್ಯಮಂತ್ರಿ ಪರಿವಾರದ ಭ್ರಷ್ಟಾಚಾರದಿಂದ ಎಂದು ಮಾಜಿ ಸಿಎಂ ಆರೋಪಿಸಿದ್ದಾರೆ.
ಬಿಜೆಪಿ ಉಸ್ತುವಾರಿ ಗರಂ
ರಾಜ್ಯ ಬಿಜೆಪಿ ಉಸ್ತುವಾರ ಅರುಣ್ ಸಿಂಗ್ ಅವರು ಈಶ್ವರಪ್ಪ ಪತ್ರ ಸಮರಕ್ಕೆ ಅಸಮಾಧಾನಗೊಂಡಿದ್ದಾರೆ. ಈಶ್ವರಪ್ಪ ಅವರು, ತಮ್ಮ ದೂರನ್ನು ಸಾರ್ವಜನಿಕಗೊಳಿಸಬಾರದಿತ್ತು. ಪಕ್ಷದ ವೇದಿಕೆಯಲ್ಲಿ ಸಿಎಂ ಹಸ್ತಕ್ಷೇಪದ ಬಗ್ಗೆ ಹೇಳಿಕೊಳ್ಳಬಹುದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಬೆಂಬಲಿಗ ಸಚಿವರು ಹಾಗೂ ಶಾಸಕರು ಹಿರಿಯ ಸಚಿವ ಈಶ್ವರಪ್ಪರ ನಡೆ ಸರಿಯಾದುದಲ್ಲ ಎಂದು ಹೇಳಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಈಶ್ವರಪ್ಪ ಹಿರಿಯರಿದ್ದಾರೆ. ಈ ರೀತಿ ಬಹಿರಂಗ ಹೇಳಿಕೆ ಕೊಟ್ಟಿರುವುದು ಸರಿಯಲ್ಲ ಎಂದಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡದೆ ಯಡಿಯೂರಪ್ಪ ಅವರು ತಪ್ಪು ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆಯುವ ಜರೂರತ್ತು ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಹೇಳಿಕೆ ಹಿಂಪಡೆಯಲಿ
ಈಶ್ವರಪ್ಪ ಅವರು ಅನುಭವಿಯಾಗಿದ್ದರೂ ಅಪ್ರಬುದ್ಧವಾಗಿ ನಡೆದುಕೊಂಡಿದ್ದಾರೆ. ಸಿಎಂಗೆ ಪರಮಾಧಿಕಾರ ಇದೆ, ಒಂದು ವೇಳೆ ಲೋಪವಾಗಿದ್ದರೆ, ಪಕ್ಷದ ವೇದಿಕೆಯಲ್ಲಿ ಚರ್ಚೆಮಾಡಬೇಕು. ಸಿಎಂ ಜೊತೆ ಕುಳಿತು ಚರ್ಚೆ ಮಾಡಬೇಕು.ಹೀಗೆ ಮಾಡದೆ ರಾಜ್ಯಪಾಲರಿಗೆ ಪತ್ರಬರೆದು ಪಕ್ಷಕ್ಕೆ ಮುಜುಗರ ತಂದಿದ್ದಾರೆ. ಬಿಜೆಪಿ ಕೇಂದ್ರ ನಾಯಕತ್ವ ದುರ್ಬಲವಾಗಿಲ್ಲ. ಈ ರೀತಿಯ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.