ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರಾದ ಹಲವರು ತಾವೂ ಸಹ ಕಾಂಗ್ರೆಸ್‌ನ್ನು ಸೇರಿರುವುದಾಗಿ ಶುಕ್ರವರ ಪ್ರಕಟಿಸಿದರು.
ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿದ್ದ ಜಿ. ಡಿ. ಮಂಜುನಾಥ ಮತ್ತು ಜೆಡಿಎಸ್ ಮುಖಂಡರಾಗಿದ್ದ ಅಮೀರ್ ಹಮ್ಜಾ, ನಾಗರಾಜ್ ಮೊದಲಾದವರು ಜಂಟೀ ಸುದ್ದಿಗೋಷ್ಠಿ ನಡೆಸಿ, ಮಧು ಮಾ. ೧೧ ರಂದು ಕಾಂಗ್ರೆಸ್ ಸೇರಿದ್ದಾರೆ. ಅವರ ದಾರಿಯಲ್ಲೇ ತಾವೆಲ್ಲ ಸಾಗಲಿದ್ದೇವೆ. ಅಧಿಕೃತವಾಗಿ ಈ ಬಗ್ಗೆ ಇಂದು ಘೋಷಣೆ ಮಾಡುತ್ತಿದ್ದೇವೆ ಎಂದರು.
ಈಗಾಗಲೇ ಯುವಜನತಾದಳ ಮತ್ತ ಜನತಾದಳದ ಹಲವು ನಾಯಕರು ಮಧು ಅವರ ದಾರಿಯಲ್ಲಿ ಮುಂದುವರೆಯುವುದಾಗಿ ಘೋಷಿಸಿದ್ದಾರೆ. ಪ್ರತಿ ತಾಲೂಕು ಮತ್ತು ವಿವಿಧ ಘಟಕಗಳವರು ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಅಲ್ಲಿಯೇ ಕಾಂಗ್ರೆಸ್ ಸೇರ್ಪಡೆಯನ್ನು ಪ್ರಕಟಿಸಿದ್ದಾರೆ. ಕುಂಸಿ ಭಾಗದವರು ಸಹ ಇಂದು ಕಾಂಗ್ರೆಸ್ ಸೇರಿದ್ದಾರೆ ಎಂದರು.
ಕಾರ್‍ಯಕರ್ತರಿಗೆ ಜೆಡಿಎಸ್‌ನಲ್ಲಿ ಬೆಲೆ ಸಿಗಲಿಲ್ಲ. ಆದ್ದರಿಂದ ಬೇಸರಗೊಂಡಿದ್ದಾರೆ. ಜೊತೆಗೆ ಲೋಕಸಭೆ ಚುನಾವಣೆ ನಂತರ ಪಕ್ಷ ಕಾರ್‍ಯಾಚರಣೆಯನ್ನು ನಿಲ್ಲಿಸಿದ್ದು ಸರಿಯಲ್ಲ. ತಾವೆಲ್ಲರೂ ಜಾತ್ಯತೀತ ತತ್ತ್ವದಲ್ಲಿ ನಂಬಿಕೆ ಇಟ್ಟವರು. ಈ ದಿಸೆಯಲ್ಲಿ ಕಾಂಗ್ರೆಸ್ ಸೇರಿದ್ದೇವೆ. ಇಲ್ಲಿ ಯಾವ ಬೇಡಿಕೆಯನ್ನೂ ಇಟ್ಟಿಲ್ಲ ಎಂದರು. ಬೆಳಗಾವಿಯಲ್ಲಿ ಅಲ್ಲಿನ ಜೆಡಿಎಸ್ ಜಿಲ್ಲಾಧ್ಯಕ್ಷ ಅಶೋಕ್ ಪೂಜಾರಿ ಕಾಂಗ್ರೆಸ್ ಸೇರಿದ್ದಾರೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ಮಧು ಪತ್ರಿಕಾಗೋಷ್ಠಿ ನಡೆಸಿ ಜೆಡಿಎಸ್‌ನ ಹಲವರನ್ನು ಕಾಂಗ್ರೆಸ್‌ಗೆ ಕರೆತರಲಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾ ಮಾಜಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಕೂಡ ಕಾಂಗ್ರೆಸ್ ಸೇರುವರು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಉದಯಕುಮಾರ್, ನಾಗೇಶ್, ಮಮತಾ, ಸದಾಶಿವ, ಕುಂಸಿ ಜಿಪಂ ಮಾಜಿ ಸದಸ್ಯ ತೇಜಪ್ಪ ಸಹಿತ ಹಲವು ಮುಖಂಡರು ಹಾಜರಿದ್ದರು.