ಶಿವಮೊಗ್ಗಡಿಸಿಸಿ ಬ್ಯಾಂಕ್‌ನಲ್ಲಿ ಬಂಗಾರದ ಅಡಮಾನ ಸಾಲಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಡಳಿತ ಮಂಡಳಿಯಲ್ಲಿ ಸರ್ವಾನುಮತದ ತೀರ್ಮಾನವಾಗಿದ್ದು, ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಚನ್ನವೀರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾರದ ಅಡಮಾನ ಸಾಲಕ್ಕೆ ಸಂಬಂಧಿಸಿದಂತೆ ಸಿಒಡಿ ತನಿಖೆ ಆಗಿದೆ. ಆದರೆ ಆ ತನಿಖೆ ಸಮರ್ಪಕವಾಗಿ ಆಗಿಲ್ಲ. ಇದನ್ನು ಪ್ರಶ್ನಿಸಿ ಸಿಬಿಐ ತನಿಖೆಗೆ ಆಡಳಿತ ಮಂಡಳಿ ಸಭೆ ಸೇರಿ ಸರ್ವಾನುಮತದಿಂದ ತೀರ್ಮಾನಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೂ ಪತ್ರ ಬರೆದಿದ್ದೇವೆ ಮತ್ತು ಈ ಪ್ರಕರಣದ ಸುಮಾರು ೧೭ ಜನ ಆರೋಪಿಗಳ ಆಸ್ತಿಯನ್ನು ಹರಾಜು ಹಾಕಲು ತೀರ್ಮಾನಿಸಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಈ ಹಿಂದೆ ರಾಜ್ಯದ ಬಿಜಾಪುರ, ಬಾಗಲಕೋಟಿ ಮತ್ತು ಚನ್ನರಾಯಪಟ್ಟಣದ ಸಕ್ಕರೆ ಕಾರ್ಖಾನೆಗಳಿಗೆ ಸುಮಾರು ೯೦ ಕೋಟಿ ಸಾಲ ನೀಡಿದ್ದು, ಈ ಸಾಲ ನಿಯಮ ಬಾಹಿರವಾಗಿದೆ ಎಂದು ಬ್ಯಾಂಕಿನ ಸುಮಾರು ೧೧ ಜನ ನಿರ್ದೇಶಕರು ದೂರು ನೀಡಿದ್ದರು. ಇದು ಕೂಡ ತನಿಖೆಯಾಗಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಸುರಕ್ಷಾ ಗೋಡೌನ್ ಮಾಲೀಕ ನಾಗರಾಜ್ ಎಂಬುವವರಿಗೆ ಸುಮಾರು ೧೪ ಕೋಟಿ ಸಾಲ ನೀಡಿದ್ದು, ಆ ಸಾಲ ವಸೂಲಾತಿಗಾಗಿ ಅನೇಕ ಬಾರಿ ಅವರ ಆಸ್ತಿಯನ್ನು ಹರಾಜು ಮಾಡಲು ನೋಟಿಸ್ ನೀಡಿದ್ದೇವೆ. ಸುಮಾರು ೬ ಬಾರಿ ಬ್ಯಾಂಕ್ ಈ ಪ್ರಯತ್ನ ಮಾಡಿದೆ. ಆದರೆ ಆ ವ್ಯಕ್ತಿ ಒಂದಲ್ಲಾ ಒಂದು ರೀತಿಯಲ್ಲಿ ಹೈಕೋರ್ಟ್‌ನಿಂದ ಸ್ಟೇ ತಂದು ತಪ್ಪಿಸಿಕೊಳ್ಳುತ್ತಿದ್ದಾರೆ. ಈಗ ನ್ಯಾಯಾಲಯದಲ್ಲಿ ಅವರ ಪರವಾಗಿ ಒಂದು ಕೇಸು ಮಾತ್ರಯಿದ್ದು, ಅದನ್ನು ಕೂಡ ವಜಾ ಪಡಿಸಲಿದ್ದೇವೆ. ನಂತರ ಅವರ ಆಸ್ತಿಯನ್ನು ಮುಟ್ಟುಗೋಲುಹಾಕಿ ಬ್ಯಾಂಕಿಗೆ ಬರಬೇಕಾದ ಸಾಲವನ್ನು ಪಡೆಯಲಾಗುವುದು ಎಂದರು.
ರಾಜೀನಾಮೆ ನೀಡುತ್ತೇನೆ
ನಿರ್ದೇಶಕ ದುಗ್ಗಪ್ಪಗೌಡರು ನಿಮ್ಮ ಬಗ್ಗೆ ಆರೋಪ ಮಾಡಿದ್ದಾರೆ. ರೈತರಿಂದ ಕಮಿಷನ್ ಪಡೆದಿದ್ದಾರೆ. ಸಿಬ್ಬಂದಿಗಳ ವರ್ಗಾವಣೆಯಲ್ಲಿ ಲಂಚ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಅವರು ಕೂಡ ಪತ್ರಿಕಾಗೋಷ್ಠಿಯಲ್ಲಿ ಈಗ ಇದ್ದಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ರೈತರಿಂದಲೂ ಕಮಿಷನ್ ಪಡೆದಿಲ್ಲ. ವರ್ಗಾವಣೆಯಲ್ಲಿ ಹಣ ತೆಗೆದುಕೊಂಡಿಲ್ಲ. ಒಂದು ಪಕ್ಷ ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದರು.