Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಸಿಗಂದೂರು ಗೂಡಂಗಡಿ, ಹೋಟೆಲ್‍ತೆರವು

ಆಡಳಿತ ಮಂಡಳಿಯಿಂದ ನ್ಯಾಯಾಲಯದ ಆದೇಶ ಪಾಲನೆ

ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಸಾಗರ ತಾಲೂಕಿನ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದ ಆಡಳಿತ ಮಂಡಳಿಯು ತನ್ನ ಸುಪರ್ದಿಯಲ್ಲಿದ್ದ ಕೆಲವು ಕಟ್ಟಡಗಳನ್ನು ತೆರವು ಮಾಡಿ ನ್ಯಾಯಾಲಯದ ಆದೇಶ ಪಾಲಿಸಿದೆ.
ಲಕ್ಷ್ಮೀನಾರಾಯಣ, ಗೋವರ್ಧನ್ ಹಾಗೂ ಶಿವರಾಜ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ರಾಜ್ಯ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎ,ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ದೇವಾಲಯ ಹೊರತಾದ ಒತ್ತುವರಿ ಜಾಗವನ್ನು ತೆರವು ಮಾಡಲು ಆದೇಶ ಮಾಡಿತ್ತು. ನ್ಯಾಯಾಲಯದ ಸೂಚನೆ ಒಪ್ಪಿಕೊಂಡಿದ್ದ ದೇವಳದ ಆಡಳಿತ ಮಂಡಳಿಯು ದೇವಸ್ಥಾನದ ಸುಪರ್ದಿಯಲ್ಲಿದ್ದ ಒಟ್ಟು 12.16 ಎಕರೆ ಭೂಮಿಯಲ್ಲಿ 6 ಎಕರೆ 16 ಗುಂಟೆ ಭೂಮಿಯನ್ನು ಸ್ವಯಂ ಖುಲ್ಲಾ ಮಾಡಿಕೊಡಲು ಒಪ್ಪಿಕೊಂಡಿತ್ತು.
ನ್ಯಾಯಾಲಯದ ಆದೇಶದಂತೆ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ಆಡಳಿತ ಮಂಡಳಿಯು ದೇಗುಲದ ಮುಂಭಾಗದಲ್ಲಿದ್ದ 22 ಗೂಡಂಗಡಿ, ಕಾರ್ಮಿಕರ ವಾಸದ ಕಟ್ಟಡ ಎಲ್ಲವನ್ನೂ ತೆರವು ಮಾಡಿತ್ತು. ಶನಿವಾರವೂ ತೆರವು ಕಾರ್ಯವನ್ನು ಮುಂದುವರಿಸಿದ್ದ ಆಡಳಿತ ಮಂಡಳಿಯು ನ್ಯಾಯಾಲಯದ ಆದೇಶದಂತೆ ಬಿಟ್ಟು ಕೊಡಬೇಕಾಗಿದ್ದ ಭೂಮಿಯಲ್ಲಿದ್ದ ಹೋಟೆಲ್ ಹಾಗೂ ವಸತಿ ನಿವಾಸವನ್ನು ತೆರವು ಮಾಡಿತು. ಸುಳ್ಳಳ್ಳಿ ನಾಡಕಚೇರಿ ಉಪ ತಹಸೀಲ್ದಾರ್ ಮಾಲಿನಿ ಅವರ ಸಮ್ಮುಖದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೇವಾಲಯದ ಸಿಬ್ಬಂದಿಗಳೇ ವಾಸವಿದ್ದವರ ಎಲ್ಲ ಸರಕು ಸರಂಜಾಮುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಕಟ್ಟಡವನ್ನು ತೆರವು ಮಾಡಿದರು. ನ್ಯಾಯಾಲಯದ ಆದೇಶ ಜಾರಿಗೊಳಿಸುವ ಸಂದರ್ಭ ಸಾಗರ ಗ್ರಾಮಾಂತರ ಪೊಲೀಸರಿಂದ ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ನ್ಯಾಯಾಲಯದ ಆದೇಶ ಪಾಲನೆ ಮಾಡುವ ಉದ್ದೇಶದಿಂದ ದೇವಸ್ಥಾನ ಟ್ರಸ್ಟ್‍ನವರು ತಹಶೀಲ್ದಾರ್ ಕಚೇರಿಗೆ ಮನವಿ ಮಾಡಿದ್ದರಿಂದ ಇಲಾಖೆ ಪ್ರತಿನಿಧಿಯಾಗಿ ಹಾಜರಿದ್ದೆ. ದೇವಾಲಯದ ಆಡಳಿತ ಮಂಡಳಿಯು ಈಗಾಗಲೇ ಎಲ್ಲ ಕಟ್ಟಡ ತೆರವು ಮಾಡಿದೆ. ಹೊಟೆಲ್ ಕಟ್ಟಡದ ತೆರವು ಕಾರ್ಯವೂ ಸುಗಮವಾಗಿ ನಡೆಯಿತು.
-ಮಾಲಿನಿ, ಉಪತಹಸೀಲ್ದಾರ್, ಸುಳ್ಳಳ್ಳಿ, ಸಾಗರ ತಾಲೂಕು

ದೇವಾಲಯದ ಆಡಳಿತ ಮಂಡಳಿಯು ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಬಿಟ್ಟುಕೊಡಬೇಕಿರುವ ಸ್ಥಳದಲ್ಲಿದ್ದ ಎಲ್ಲಾ ಕಟ್ಟಡಗಳು ಮತ್ತು ಬೇಲಿಯನ್ನು ತೆರವು ಮಾಡಿಕೊಟ್ಟಿದೆ. ಇದಕ್ಕೆ ಸರಕಾರಿ ಅಧಿಕಾರಿಗಳು ಮತ್ತು ರಕ್ಷಣಾ ಇಲಾಖೆಯವರು ಸಹಕರಿಸಿದ್ದಾರೆ. ಘನ ನ್ಯಾಯಾಲಯದ ಆದೇಶದಂತೆ ದೇಗುಲದ ಆಡಳಿತ ಮಂಡಳಿ ನಡೆದುಕೊಂಡಿದೆ.

-ಪ್ರಕಾಶ್ ಭಂಡಾರಿ- ವ್ಯವಸ್ಥಾಪಕ, ಸಿಗಂದೂರು ದೇವಸ್ಥಾನ


ಅರ್ಚಕರ ವಸತಿ ಗೃಹ, ಕಾಂಪೌಂಡ್ ತೆರವು ಬಾಕಿ

ಬಿಟ್ಟುಕೊಡಲು ಸೂಚಿಸಿರುವ 6 ಎಕರೆ ಜಾಗದಲ್ಲಿ ದೇವಾಲಯದ ಅರ್ಚಕರ ನಿವಾಸವೂ ಇದ್ದು, ಅದನ್ನು ತೆರವು ಮಾಡಿ ವರದಿ ನೀಡುವಂತೆ ಉಚ್ಛನ್ಯಾಯಾಲಯವು ಆದೇಶ ನೀಡಿದೆ. ಅರ್ಚಕರು ಮತ್ತು ದೇವಳದ ಟ್ರಸ್ಟ್ ನಡುವೆ ಕೆಲ ವಿಚಾರಗಳಿಗೆ ತಗಾದೆ ಇರುವ ಕಾರಣ ಆಡಳಿತ ಮಂಡಳಿಯೇ ಅರ್ಚಕರು ಮಾಡಿಕೊಂಡಿರುವ ಒತ್ತುವರಿ ತೆರವು ಮಾಡುವುದು ಸರಿಯಲ್ಲ. ಈ ಕಾರಣದಿಂದ ಶಿವಮೊಗ್ಗ ಜಿಲ್ಲಾಧಿಕಾರಿಯವರೇ ಅರ್ಚಕರ ಸ್ವತ್ತುಗಳನ್ನು ತೆರವು ಮಾಡಬೇಕೆಂದು ಆದೇಶ ನೀಡಿದೆ. ಆದ್ದರಿಂದ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿಗಳು ಮಾಡಿಸಬೇಕಾದ ತೆರವು ಪ್ರಕ್ರಿಯೆ ಬಾಕಿಯಿದೆ.

Ad Widget

Related posts

ಸಂಸದರು ಇತಿಹಾಸ ಅರಿತು ಮಾತಾಡಲಿ: ಮಧುಬಂಗಾರಪ್ಪ, ಬಗರ್‌ಹುಕುಂ ಸಾಗುವಳಿದಾರರನ್ನು ಬೀದಿಗೆ ತಳ್ಳಿದ ಬಿಜೆಪಿ ಸರಕಾರ

Malenadu Mirror Desk

ಸತ್ಯಶೋಧದ ಹೆಸರಲ್ಲಿ ಪ್ರಕ್ಷುಬ್ಧಗೊಳಿಸುವ ಹೇಳಿಕೆ ಸಲ್ಲದು: ಆಯನೂರು ಮಂಜುನಾಥ್

Malenadu Mirror Desk

ಸಂವಿಧಾನವನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು : ನ್ಯಾ.ಮುಸ್ತಫಾ ಹುಸೇನ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.