ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಮತ್ತಷ್ಟು ಗಂಭೀರವಾಗಿದ್ದು, ಭಾನುವಾರ ಒಂದೇ ದಿನ 17 ಸೋಂಕಿತರು ಸಾವಿಗೀಡಾಗಿದ್ದರೆ, ಸೋಂಕಿತರ ಸಂಖ್ಯೆ 857 ಕ್ಕೇರಿದೆ. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯಲ್ಲಿ 857 ಮಂದಿಗೆ ಸೋಂಕು ತಗುಲಿದ್ದು, 748 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 495ಕ್ಕೆ ಏರಿದೆ. ಶಿವಮೊಗ್ಗ ತಾಲೂಕಿನಲ್ಲಿ 265 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 34,ಶಿಕಾರಿಪುರ 43,ತೀರ್ಥಹಳ್ಳಿಯಲ್ಲಿ 129 ,ಸೊರಬ 62,ಸಾಗರ 192,ಹೊಸನಗರ 111 ಹಾಗೂ ಇತರೆ ಜಿಲ್ಲೆಗಳ 21 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ. 44 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 4597 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನ ಸೋಂಕು
ಮಲೆನಾಡಿನ ತಾಲೂಕುಗಳ ಬಹುತೇಕ ಪ್ರಕರಣಗಳು ಬೆಂಗಳೂರಿನಿಂದ ಬಂದವರಲ್ಲಿ ಕಾಣಿಸಿಕೊಂಡಿವೆ. ಕೆಲಸ ಅರಸಿ ರಾಜಧಾನಿಗೆ ಹೋಗಿದ್ದ ಜನರು ಜನತಾ ಕಫ್ರ್ಯೂ ಘೋಷಣೆ ಮಾಡುತ್ತಲೇ ಊರುಗಳತ್ತ ಧಾವಿಸಿದ್ದರು. ಊರಿಗೆ ಬಂದವರು ಮದುವೆ , ಬೀಗರೂಟ ಅಂತ ಓಡಾಡಿಕೊಂಡು ಸೋಂಕು ಹೆಚ್ಚಲು ಕಾರಣರಾಗಿದ್ದಾರೆ ಎನ್ನಲಾಗಿದೆ. ಜನರು ಲಾಕ್‍ಡೌನ್ ಅನ್ನು ಗಂಭೀರವಾಗಿ ಪರಿಗಣಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.