Malenadu Mitra
ರಾಜ್ಯ ಶಿವಮೊಗ್ಗ

ರಂಜಾನ್,ಬಸವ ಜಯಂತಿ ಆಚರಣೆಗೆ ಗೊಂದಲ ಬೇಡ

ಬರಲಿರುವ ರಂಜಾನ್ ಹಾಗೂ ಬಸವ ಜಯಂತಿ ಆಚರಣೆಗೆ ಯಾವುದೇ ಗೊಂದಲ ಬೇಡ. ಬೆಳಿಗ್ಗೆ ೬ರಿಂದ ೧೦ ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು, ದಾರಿತಪ್ಪಿಸುವ ಹೇಳಿಕೆಗಳಿಗೆ ಯಾರು ಕೂಡ ಕಿವಿಗೊಡಬಾರದು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಜಾನ್ ಮತ್ತು ಬಸವ ಜಯಂತಿ ಆಚರಣೆಗೆ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ. ಲಾಕ್‌ಡೌನ್ ಜಾರಿಯಲ್ಲಿದ್ದರೂ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ದಿನಸಿ, ತರಕಾರಿ, ಹಣ್ಣು,ಮೀನು, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲಿ ಖರೀದಿ ಮಾಡಬಹುದಾಗಿದೆ ಎಂದರು.
ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುವಾರದಿಂದ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲು ತೀರ್ಮಾನಿಸಲಾಗಿದೆ. ಕೆಲವು ಅಗತ್ಯ ಸೇವೆಗಳನ್ನು ಹೊರತುಪಡಿಸಿ ನಾಲ್ಕು ದಿನಗಳ ಕಾಲ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಇದೇ ಸಂದರ್ಭದಲ್ಲಿ ರಂಜಾನ್ ಹಾಗೂ ಬಸವ ಜಯಂತಿ ಹಬ್ಬ ಎದುರಾಗಿದೆ. ಆದರೆ ಹಬ್ಬ ಆಚರಣೆಗೆ ಯಾವುದೇ ತೊಂದರೆ ಇಲ್ಲ. ದಾರಿತಪ್ಪಿಸುವ ಹೇಳಿಕೆಗಳನ್ನು ಸಾರ್ವಜನಿಕರು ನಂಬಬಾರದು ಎಂದರು.
ಬಿಜೆಪಿ ಸರ್ಕಾರ ಎಲ್ಲ ಜಾತಿ ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕೆಲವರು ಹಬ್ಬದ ಸಂದರ್ಭದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ ಎಂದು ಕೋಮು ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ನಾಲ್ಕು ದಿನಗಳು ಸಂಪೂರ್ಣ ಲಾಕ್‌ಡೌನ್

ಜಿಲ್ಲೆಯಲ್ಲಿ ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ ನಾಲ್ಕು ದಿನಗಳು ಸಂಪೂರ್ಣ ಲಾಕ್‌ಡೌನ್ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದೆ. ಇದಕ್ಕೆ ಕೈಗಾರಿಕೋದ್ಯಮಿಗಳು, ಗಾಂಧಿ ಬಜಾರ್ ವರ್ತಕರ ಸಂಘ, ಸೇರಿದಂತೆ ಹಲವರು ಬೆಂಬಲ ನೀಡಿದ್ದಾರೆ. ಆದರೆ ರಕ್ಷಣೆ, ರೈಲ್ವೆ, ಮೆಡಿಕಲ್, ಆಹಾರ ಸಂಸ್ಕರಣಾ ಘಟಕ ಇವುಗಳಿಗೆಲ್ಲಾ ಆದ್ದರಿಂದ ವಿನಾಯಿತಿ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ಈ ನಾಲ್ಕು ಘಟಕಗಳು ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಗೆ ೧೬,೦೦೦ ಲಸಿಕೆ ಬಂದಿದೆ. ಅದರಲ್ಲಿ ೩೦೦೦ ಲಸಿಕೆ ಖರ್ಚಾಗಿದೆ. ಉಳಿದಿರುವ ಲಸಿಕೆಯನ್ನು ಹಂಚಿಕೆ ಮಾಡಲಾಗುತ್ತಿದೆ. ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಇಲ್ಲ. ಜಿಲ್ಲೆಯಲ್ಲಿ ಆಕ್ಸಿಜನ್‌ಗೆ ಕೊರತೆ ಉಂಟಾಗಬಾರದು ಎಂದು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ೧೦ ಮಂದಿ ಸೋಂಕಿತರು ಬರುವ ಕಡೆ ಒಮ್ಮೆಲೇ ನೂರು ಜನ ಬಂದರೆ ಏನು ಮಾಡಲು ಸಾಧ್ಯ? ಇರುವ ಸೌಲಭ್ಯಗಳನ್ನು ಬಳಸಿಕೊಂಡು ಸೋಂಕಿತರಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಯೋಗಾಲಯದಿಂದ ವರದಿ ಬರುವುದು ತಡವಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಮತ್ತೆರಡು ಪ್ರಯೋಗಾಲಯ ಸಿದ್ಧವಾಗಿದೆ. ಮುಂದಿನ ದಿನದಲ್ಲಿ ೨೪ಗಂಟೆಯೊಳಗೆ ವರದಿ ನೀಡುವ ಪ್ರಯತ್ನ ನಡೆದಿದೆ. ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಸೂಡಾ ಅಧ್ಯಕ್ಷ ಎಸ್. ಎಸ್. ಜ್ಯೋತಿಪ್ರಕಾಶ್ ಉಪಸ್ಥಿತರಿದ್ದರು.

ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಕೈಗೊಳ್ಳುವ ನಿರ್ಧಾರಕ್ಕೆ ಕೈಗಾರಿಕೋದ್ಯಮಿಗಳು ಸಂಪೂರ್ಣ ಬೆಂಬಲ ನೀಡುತ್ತಾರೆ. ಆದರೆ ಸರ್ಕಾರದ ನಿಯಮದಂತೆ ಕೆಲವು ಕೈಗಾರಿಕೆಗಳು ಕಾರ್ಯ ನಿರ್ವಹಿಸಬಹುದಾಗಿದೆ. ಪ್ರಮುಖವಾಗಿ ರಕ್ಷಣೆ, ರೈಲ್ವೆ ಇಲಾಖೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕಿದೆ. ಈ ಕಾರಣಕ್ಕಾಗಿ ಹೇಳಿಕೆ ನೀಡಿದ್ದೆನೇ ಹೊರತು, ಇದನ್ನು ತಪ್ಪಾಗಿ ಅರ್ಥೈಸಬಾರದು.
-ಎಸ್ ರುದ್ರೇಗೌಡ  ವಿಧಾನಪರಿಷತ್ ಸದಸ್ಯ 

Ad Widget

Related posts

ಶಾಸಕರಿಗೆ ಹೆಚ್ಚುವರಿ ಹಾಗೂ ನಾಮನಿರ್ದೇಶಿತ ಸದಸ್ಯರಿಗೆ ಅನುದಾನ ಒದಗಿಸಲು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಸಭೆ ಒತ್ತಾಯ

Malenadu Mirror Desk

ಪುರದಾಳು ಜಾತ್ರೆ, ಏನೆಲ್ಲಾ ವಿಶೇಷ ?

Malenadu Mirror Desk

ಮೂರ್ತಿರಾವ್ ಜನಪರ ಚಿಂತಕ: ಕಾಗೋಡು ತಿಮ್ಮಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.