ಕೊರೊನ ಸಂತ್ರಸ್ಥರಿಗೆ ಧೈರ್ಯ ತುಂಬುತ್ತಾ, ಅವಲಂಬಿತರಿಗೆ ಅನ್ನ ನೀಡುತ್ತಾ ಜನಕಾಯದಲ್ಲಿಯೇ ತೊಡಗಿದ್ದ ಶರಣ್(35) ಅವರನ್ನು ಮಹಾಮಾರಿ ಕೊರೊನ ಬಲಿಪಡೆದಿದೆ. ಶಿವಮೊಗ್ಗ ನಗರದಲ್ಲಿ ಕೊರೊನ ಎರಡನೇ ಅಲೆ ಹೆಚ್ಚಾಗುತ್ತಲೇ ನಗರ ಸಂಸ್ಕೃತಿ ಫೌಂಡೇಷನ್, ಆಹಾರ ಕಿಟ್ ಹಾಗೂ ಐಸೋಲೇಷನ್ ಕಿಟ್ ನೀಡುತ್ತಾ ಕೊರೊನ ಸಂತ್ರಸ್ಥರ ಪರ ಕೆಲಸ ಮಾಡುತಿತ್ತು. ಅದರ ಸಮಾಜಮುಖಿ ಕಾರ್ಯವನ್ನು ಸಂಸದ ರಾಘವೇಂದ್ರ ಕೂಡಾ ಮುಕ್ತ ಕಂಠದಿಂದ ಶ್ಲಾಘಿಸಿದ್ದರು.
ಸಂಸ್ಕೃತಿ ಪೌಂಡೇಷನ್ ಮುಖ್ಯಸ್ಥ ಶರಣ್ ಕೊರೊನ ವಿರುದ್ಧ ಜನಜಾಗೃತಿ ಹಾಗೂ ಸೋಂಕು ನಿಯಂತ್ರಣಕ್ಕೆ ಹೋರಾಡುತ್ತಲೇ ಮಹಾಮಾರಿಗೆ ಬಲಿಯಾಗಿರುವುದು ಮಾತ್ರ ವಿಧಿಯ ಅಟ್ಟಹಾಸವೇ ಸರಿ. ಜನಕಾಯಕ ಮಾಡುತ್ತಲೇ ತನಗೆ ಸೋಂಕು ತಗುಲಿದ್ದನ್ನು ಶರಣ್ ನಿರ್ಲಕ್ಷ್ಯ ಮಾಡಿರುವ ಸಾಧ್ಯತೆಯಿದೆ. ಶುಕ್ರವಾರ ಸೋಂಕು ಅತಿಯಾಗಿ ಉಸಿರಾಟದ ತೊಂದರೆಯಿಂದ ಅವರು ನಿಧನರಾಗಿದ್ದಾರೆ.
ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದ ವಾಸಿಯಾಗಿದ್ದ ಶರಣ್‍ಗೆ ತಂದೆ ಹೊಳೆಹೊನ್ನೂರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವಿಶ್ವಾನಾಥ್, ತಾಯಿ ಸುಜಾತ ಹಾಗೂ 3 ವರ್ಷದ ಮಗಳು ಗೌರಿ ಇದ್ದಾರೆ. ಶರಣ್ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಕೆ.ಎಸ್.ಈಶ್ವರಪ್ಪ, ಶಾಸಕ ಕೆ.ಬಿ.ಅಶೋಕ ನಾಯ್ಕ, ಜಿ.ಪಂ. ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.