ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆಮಾಡಿಕೊಂಡಿರುವ ಘಟಣೆ ಹೊಸನಗರ ತಾಲೂಕು ಆನೆಗದ್ದೆ ಗ್ರಾಮದಲ್ಲಿ ನಡೆದಿದೆ. ಮಂಜುಳ (35) ಮೃತ ದುರ್ದೈವಿಯಾಗಿದ್ದಾಳೆ. ಮದ್ಯದ ದಾಸಿಯಾಗಿದ್ದ ಮಂಜುಳ ದಿನಪೂರ್ತಿ ಕುಡಿದು ಗಲಾಟೆ ಮಾಡುತ್ತಿದ್ದಳು. ಗುರುವಾರ ರಾತ್ರಿಯೂ ಕುಡಿತದ ಅಮಲಿನಲ್ಲಿ ಅಮ್ಮ, ತಂಗಿಯನ್ನ ಮನೆಯಿಂದ ಹೊರಗೆ ಎಳೆದು ಹಾಕಿದ ಮಂಜುಳ ಮನೆಯ ಹಾಲ್‍ನಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾಳೆ ಎನ್ನಲಾಗಿದೆ.
13 ವರ್ಷದ ಹಿಂದೆ ರಾಮಪ್ಪಗೌಡ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ ಮಂಜುಳ ಅವರಿಗೆ 6 ವರ್ಷದ ಹೆಣ್ಣುಮಗುವಿದೆ. ಸಾಂಸಾರಿಕ ಸಮಸ್ಯೆಗಳಿಂದಾಗಿಯೇ ಕುಡಿತಕ್ಕೆ ಬಿದ್ದಿದ್ದ ಮಂಜುಳಾ ಅವರನ್ನು ರಾಮಪ್ಪಗೌಡ ಅವರು ದೂರ ಮಾಡಿದ್ದರೆನ್ನಲಾಗಿದೆ. ಲಾಕ್‍ಡೌನ್ ಕಾರಣದಿಂದ ತವರುಮನೆಗೆ ಬಂದಿದ್ದ ಮಂಜುಳಾ ಇಲ್ಲಿಯೂ ಕುಡಿತ ಮುಂದುವರಿಸಿದ್ದಲ್ಲದೆ, ಊರಿನಲ್ಲಿ ಜನರ ನಿಷ್ಠುರ ಕಟ್ಟಿಕೊಂಡಿದ್ದೆಳನ್ನಲಾಗಿದೆ. ರೂಪವತಿಯಾಗಿದ್ದ ಮಂಜುಳ ಕುಡಿತದ ಕಾರಣಕ್ಕಾಗಿ ಉತ್ತಮ ಜೀವನ ಲಯತಪ್ಪುವಂತೆ ಮಾಡಿಕೊಂಡಿದ್ದೆಳೆನ್ನಲಾಗಿದೆ.
ಆನೆಗದ್ದೆಯ ಮಂಜುಳಾರ ಮನೆಯಲ್ಲಿಯೇ ತಾಲೂಕಿನ ನೇರಲಮನೆಯ ಉದಯ್‍ಕುಮಾರ್ ಎಂಬಾತ ತಿಂಗಳ ಹಿಂದೆ ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದ. ಈಗ ಒಂದು ತಿಂಗಳಿಗೆ ಸರಿಯಾಗಿ ಮಂಜುಳಾಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಂಜುಳ ಸೋದರಿ ನೀಡಿದ್ದ ದೂರಿನನ್ವಯ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಹಿಂದೆ ಮಾನಸಿಕ ಖಿನ್ನತೆ ಮಾತ್ರವಿತ್ತೇ ಅಥವಾ ಬೇರೆ ಏನು ಕಾರಣ ಎಂಬುದು ತಿಳಿದುಬಂದಿಲ್ಲ.