Malenadu Mitra
ರಾಜ್ಯ ಶಿವಮೊಗ್ಗ

ಲಾಕ್‍ಡೌನ್ ಕಠಿಣ,ಎಣ್ಣೆಗೆ ಅವಕಾಶ !

ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಕಠಿಣ ಲಾಕ್‍ಡೌನ್ ನಿಯಮಾವಳಿಗಳು ಜೂನ್ 14ರವರೆಗೆ ಮುಂದುವರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಸ್ತುತ ಇರುವ ಲಾಕ್‍ಡೌನ್ ನಿಯಮಾವಳಿಗಳು ಮುಂದಿನ ಒಂದು ವಾರ ಕಾಲ ಜಾರಿಯಲ್ಲಿರಲಿವೆ. ದಿನಸಿ, ತರಕಾರಿಯಂತಹ ಅಗತ್ಯ ಸಾಮಾಗ್ರಿಗಳ ಮಾರಾಟಕ್ಕೆ ಬೆಳಿಗ್ಗೆ 6ರಿಂದ 8ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಅನುಮತಿ ನೀಡಲಾಗಿರುವ ಕೈಗಾರಿಕಾ ಉತ್ಪನ್ನಗಳ ಉತ್ಪಾದನೆಗೆ ಅವಕಾಶವಿದೆ. ಮದ್ಯ ಮಾರಾಟ (ಪಾರ್ಸೆಲ್) ಕ್ಕೆ ಬೆಳಿಗ್ಗೆ 6ರಿಂದ 8ರವರೆಗೆ ಅವಕಾಶ ನೀಡಲಾಗಿದೆ. ಎಪಿಎಂಸಿಯಲ್ಲಿ ಸರಕು ಸಾಮಾಗ್ರಿಗಳನ್ನು ಸರಕು ವಾಹನಗಳಿಂದ ಇಳಿಸಲು ಮತ್ತು ಲೋಡ್ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ನಗರ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದಲ್ಲೂ ಕರೋನಾ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಶೇ.47ರಷ್ಟಿದ್ದ ಪಾಸಿಟಿವಿಟಿ ದರ ಇದೀಗ ಶೇ.18ಕ್ಕೆ ಇಳಿದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಇದನ್ನು ಶೇ.5ಕ್ಕೆ ಇಳಿಸುವ ಗುರಿಯನ್ನು ಹೊಂದಲಾಗಿದ್ದು ಎಲ್ಲರ ಸಹಕಾರದಿಂದ ಮಾತ್ರ ಇದು ಸಾಧ್ಯವಿದೆ. ಜಿಲ್ಲೆಯ ಜನತೆ ಲಾಕ್‍ಡೌನ್‍ಗೆ ಉತ್ತಮವಾಗಿ ಸ್ಪಂದಿಸಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಕಾರಣದಿಂದ ಕರೋನಾ ನಿಯಂತ್ರಣ ಮಾಡಲು ಸಾಧ್ಯವಾಗಿದೆ. ಮುಂದಿನ ಒಂದು ವಾರ ಕಾಲ ಇದೇ ರೀತಿ ಸಹಕಾರ ನೀಡುವಂತೆ ಅವರು ಕೋರಿದರು.

27ಸಾವಿರ ಡೋಸ್ ಲಸಿಕೆ

ಕರೋನಾ ಲಸಿಕೆ ಇದೀಗ ಸಾಕಷ್ಟು ಪ್ರಮಾಣದಲ್ಲಿ ಜಿಲ್ಲೆಗೆ ಬರುತ್ತಿದ್ದು, ಅದನ್ನು ಸಮರ್ಪಕವಾಗಿ ಹಾಕುವ ಕಾರ್ಯ ನಡೆಯಬೇಕಿದೆ. ಪ್ರಸ್ತುತ ಜಿಲ್ಲೆಯಲ್ಲಿ 27ಸಾವಿರ ಡೋಸ್ ಲಸಿಕೆ ಲಭ್ಯವಿದೆ. ಸಾರ್ವಜನಿಕರಲ್ಲಿ ಗೊಂದಲವನ್ನು ತಪ್ಪಿಸಲು ಟೋಕನ್ ಹಿಂದಿನ ದಿನವೇ ನೀಡಬೇಕು. ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಲಸಿಕೆ ನೀಡುವ ಕಾರ್ಯವನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೂ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸರ್ಕಾರ ಈಗಾಗಲೇ ಗುರುತಿಸಿರುವ ಆದ್ಯತಾ ವಲಯದ ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲು 21 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನೋಡಲ್ ಅಧಿಕಾರಿಗಳು ಪ್ರಮಾಣೀಕರಿಸುವವರಿಗೆ ಲಸಿಕೆಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.

ಶಾಸಕರಾದ ಕುಮಾರ ಬಂಗಾರಪ್ಪ, ಆಯನೂರು ಮಂಜುನಾಥ, ರುದ್ರೇಗೌಡ, ಪ್ರಸನ್ನಕುಮಾರ್, ಎಸ್ಪಿ ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ದತ್ತಾತ್ರೇಯ, ಜ್ಯೋತಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Ad Widget

Related posts

ವಿಮಾನ ನಿಲ್ದಾಣಕ್ಕೆ ಎಸ್.ಬಂಗಾರಪ್ಪ ಹೆಸರಿಡಲು ಮನವಿ

Malenadu Mirror Desk

ಮಂಡ್ಲಿ ಖಬರಸ್ಥಾನ್ ಜಾಗ ಗೊಂದಲ ಬೇಡ: ಜಾಮಿಯಾ ಮಸೀದಿ ಸವಾಯಿ ಪಾಳ್ಯ ಸಮಿತಿ

Malenadu Mirror Desk

ಕುವೆಂಪು ವಿವಿ: ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಉತ್ತಮ‌ ಪ್ರತಿಕ್ರಿಯೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.