ಶಿವಮೊಗ್ಗ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಹಲವು ಅನುಕೂಲಕರವಾದ ಯೋಜನೆಗಳನ್ನು ಶಿವಮೊಗ್ಗ ಪದವೀಧರರ ಸಹಕಾರ ಸಂಘ ಘೋಷಣೆ ಮಾಡಿದೆ ಎಂದು ಅಧ್ಯಕ್ಷ ಎಸ್.ಪಿ.ದಿನೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಸದಸ್ಯರು ಅಥವಾ ಅವರ ಕುಟುಂಬದವರು ಕೊರೋನಾ ಸೋಂಕಿತರಾಗಿದ್ದರೆ ಅವರಿಂದ ಅಗತ್ಯ ದಾಖಲೆ ಪಡೆದು ಅಂತಹ ಸದಸ್ಯರಿಗೆ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಘದಿಂದ 2 ಲಕ್ಷದವರೆಗೆ ವಿಶೇಷ ಸಾಲ ನೀಡಲಾಗುವುದು ಈ ಸಾಲದ ಮೇಲಿನ ಬಡ್ಡಿಯು ಶೇ11.5ರಷ್ಟರ ಬದಲಿಗೆ ಶೇ.9ರ ದರಕ್ಕೆ ಇಳಿಸಲಾಗುವುದು. ಇದರಿಂದ ಶೇ.2.5ರಷ್ಟು ರಿಯಾಯಿತಿ ಸಿಕ್ಕಂತಾಗುತ್ತದೆ. ಸಂಘದ ಸದಸ್ಯರು ಈ ಸೌಲಭ್ಯವನ್ನು ಪಡೆಯಬೇಕೆಂದು ಕೋರಿದರು.
ಹಾಗೆಯೇ ಲಾಕ್‌ಡೌನ್ ಕಾರಣದಿಂದ ಸದಸ್ಯರು ಸಾಲದ ಮರುಪಾವತಿ ಕಷ್ಟವಾಗುತ್ತಿರುವುದರಿಂದ ಎಲ್ಲಾ ಸದಸ್ಯರು ಪಡೆದಿರುವ ಸಾಲಗಳ ಮೇಲಿನ ಸುಸ್ತಿ ಬಡ್ಡಿಯನ್ನು ಏ.1ರಿಂದ ಸುಸ್ತಿಯಾದ ಸಾಲಗಳಿಗೆ ಮಾತ್ರ ಅನ್ವಯಿಸುವಂತೆ ಡಿ.31ರ ವರೆಗೆ ಸುಸ್ತಿಬಡ್ಡಿಯನ್ನು ವಿಧಿಸದಿರಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.
ಸಂಘದ ಸದಸ್ಯರಾಗಲಿ ಅಥವಾ ಅವರ ಕುಟುಂಬದ ಯಾರೇ ಆಗಲಿ ಕೊರೋನಾ ಸೋಂಕಿತರಿಗಾಗಿ ನೀಡುವ ಸಾಲವನ್ನು ಡಿ.31ರ ವರೆಗೂ ಪಡೆಯಬಹುದಾಗಿದೆ. ಮತ್ತು ಈ ಸಾಲದ ಮೇಲಿನ ಇಳಿಕೆಯ ಬಡ್ಡಿ ಅವರು ಸಾಲ ತೀರಿಸುವವರೆಗೂ ಮುಂದುರೆಯುತ್ತದೆ ಎಂದ ಅವರು ಸಂಘದ ಎಲ್ಲಾ ಸದಸ್ಯರಿಗೆ ಲಸಿಕೆ ಹಾಕಿಸಲು ನಾರಾಯಣ ಹೃದಯಾಲಯದಲ್ಲಿ ಅವಕಾಶ ಮಾಡಲಾಗಿದೆ. ಆದರೆ ಲಸಿಕೆಗೆ ನಿಗದಿಪಡಿಸಿರುವ ಹಣವನ್ನು ನೀಡಬೇಕಾಗುತ್ತದೆ. ಕೇವಲ ಸೇವಾ ಶುಲ್ಕವನ್ನು ಮಾತ್ರ ಸಂಘವೇ ಭರಿಸುತ್ತದೆ. ಸರ್ಕಾರವೇ ನಿಗದಿಪಡಿಸಿದಂತೆ 150 ರೂ. ಸೇವಾಶುಲ್ಕವಿದ್ದು, ಇದನ್ನು ಸಂಘವೇ ಭರಿಸುತ್ತದೆ. ಇದರ ಪ್ರಯೋಜನವನ್ನು ಕೂಡ ಸಂಘದ ಸದಸ್ಯರು ಪಡೆಯಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಮಮತಾ, ನಿರ್ದೇಶಕರುಗಳಾದ ಪ್ರಸನ್ನ, ಜಗದೀಶ್, ಕೃಷ್ಣಮೂರ್ತಿ,ರಾಜ್‌ಶೇಖರ್, ಡಾ.ಚಂದ್ರಶೇಖರ್, ಕಾರ್ಯದರ್ಶಿ ಟಿ.ವಿ.ಗೋಪಾಲಕೃಷ್ಣ, ಲೆಕ್ಕಾಧಿಕಾರಿ ಕವಿತಾ ಇದ್ದರು.
previous post