ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ಯೋಜನೆ 2019ರ ಮಾರ್ಚ್ ಗೆ ಮುಗಿಯಬೇಕಿತ್ತು. ಆದರೆ, ಸರ್ಕಾರದ ವಿಳಂಬ ನೀತಿಯಿಂದ ಅದು ಇನ್ನೂ ಮುಗಿದಿಲ್ಲ. ಇದರ ಜೊತೆಗೆ ಈ ಯೋಜನೆಯನ್ನು ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೂಡ ಬಹಿರಂಗವಾಗಿಯೇ ಕೇಳಿಬರುತ್ತಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಒಂದೆರಡು ತಿಂಗಳ ಹಿಂದೆ ನಡೆದ ಸಭೆಯಲ್ಲಿಯೇ ಸುಮಾರು ೫ ಕೋಟಿ ರೂ. ಭಾರಿ ಭ್ರಷ್ಟಾಚಾರವಾಗಿದೆ. ಮೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಈ ಅವ್ಯವಹಾರ ನಡೆಸಿದ್ದಾರೆ. ಇದನ್ನು ನಾನು ಸಹಿಸುವುದಿಲ್ಲ. ಸರಿಯಾದ ಕ್ರಮ ತೆಗೆದುಕೊಳ್ಳುವೆ ಎಂದು ಹೇಳಿಕೆ ನೀಡಿದ್ದರು. ವಿರೋಧ ಪಕ್ಷವೊಂದು ಆರೋಪ ಮಾಡಬೇಕಾದ ವಿಷಯವನ್ನು ಶಾಸಕರೇ ಹೇಳಿದ್ದರಿಂದ ನಾವು ಕೂಡ ಅದನ್ನು ಸ್ವಾಗತಿಸಿದ್ದೆವು. ಆದರೆ, ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವ ಕ್ರಮವನ್ನೂ ಕೈಗೊಳ್ಳದೇ ತಟಸ್ಥರಾಗಿದ್ದಾರೆ ಎಂದರು.
ಈಶ್ವರಪ್ಪನವರ ಈ ತಟಸ್ಥ ನೀತಿಯನ್ನು ನೋಡಿದರೆ, ಕೇವಲ ಗುತ್ತಿಗೆದಾರರನ್ನು ಹೆದರಿಸಲು ಈ ರೀತಿ ಮಾತನಾಡಿದ್ದಾರೆಯೇ ಎಂಬ ಅನುಮಾನಗಳ ಜೊತೆಗೆ ಈ ಅವ್ಯವಹಾರದಲ್ಲೂ ಕೂಡ ಒಳಒಪ್ಪಂದವಾಗಿದೆ ಎಂಬ ಗುಮಾನಿಗಳು ಬರುತ್ತವೆ. ಆದ್ದರಿಂದ ಸಚಿವರು ಕೂಡಲೇ ಈ ಯೋಜನೆಯಲ್ಲಿ ಆಗಿರುವ ಅವ್ಯವಹಾರವನ್ನು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು. ಹಾಗೂ ಹೆಚ್ಚುವರಿ ಹಣ ಖರ್ಚು ಮಾಡಿದ್ದರೆ ಅದನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು.
ಇದಲ್ಲದೇ, ಈ ಯೋಜನೆ ಹಳ್ಳಿಗರನ್ನು ತಲುಪಿಲ್ಲ. ಮೆಸ್ಕಾಂನ ಸುಮಾರು ೧೦ ಕ್ಕೂ ಹೆಚ್ಚು ಇಂಜಿನಿಯರ್ ಗಳು ಈ ಬಗ್ಗೆ ಮಾಹಿತಿ ಕೂಡ ನೀಡಿದ್ದಾರೆ. ಫೀಡರ್ ಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ನಿಜ. ಕೂಡಲೇ ಇದರ ಸಂಪೂರ್ಣ ತನಿಖೆಯಾಗಲಿ ಎಂದರು.
ರಾಜ್ಯ ಸರ್ಕಾರ ಲಸಿಕೆ ಅಭಿಯಾನ ಹಮ್ಮಿಕೊಂಡಿದೆ. ಆದರೆ, ಇದು ಕಾಟಾಚಾರಕ್ಕೆ ಮಾತ್ರ ಎನ್ನುವಂತಾಗಿದೆ. ಕಳೆದೆರಡು ದಿನಗಳಿಂದ ಸರ್ಕಾರಿ ಆಸ್ಪತ್ರೆ ಮತ್ತು ಲಸಿಕೆ ಕೇಂದ್ರಗಳಲ್ಲಿ ಯಾರಿಗೂ ಲಸಿಕೆ ಸಿಗುತ್ತಿಲ್ಲ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ತಕ್ಷಣವೇ ಸಿಗುತ್ತಿದೆ. ಇಲ್ಲೂ ಕೂಡ ಖಾಸಗಿ ಆಸ್ಪತ್ರೆಗಳಿಗೆ ಸಹಕಾರ ನೀಡಲು ಒಳ ಒಪ್ಪಂದ ಮಾಡಿಕೊಂಡು ಲಸಿಕೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶ್ಯಾಮ್ ಸುಂದರ್, ರಘು, ಶಾಮೀರ್ ಖಾನ್ ಮಂಜುನಾಥ್ ಬೊಮ್ಮನಕಟ್ಟೆ ಮೊದಲಾದವರಿದ್ದರು.