ಶಿವಮೊಗ್ಗ ಜಿಲ್ಲಾಧಿಕಾರಿ ಸಂಸದ ರಾಘವೇಂದ್ರ ಅವರ ಕೈಗೊಂಬೆಯಾಗಿದ್ದಾರೆ, ಅವರು ಹೇಳದ ಹೊರತೂ ಯಾವುದೇ ಕೆಲಸವನ್ನು ಈ ಡಿಸಿ ಮಾಡುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶನಿವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು ಗಣಿಗಾರಿಕೆಯನ್ನು ಜೂನ್ 5ಕ್ಕೆ ನಿಲ್ಲಿಸಬೇಕೆಂಬ ಆದೇಶವನ್ನು ಸರಕಾರವೇ ಹೊರಡಿಸಿದೆ. ಆದರೆ ಹೊಸನಗರದ ಸುತ್ತ ಬ್ಲಾಕ್ 1 ರಲ್ಲಿ ಈಗಲೂ ನಿರಂತರ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆಗೆ ಜಿಲ್ಲಾಡಳಿತ ಸಹಕಾರ ನೀಡುತ್ತಿದೆ. ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಕಾನೂನು ಉಲ್ಲಂಘನೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ಅಕ್ರಮ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದರು ಬೇಳೂರು ಅಪಾದಿಸಿದರು.
ಹೊಸನಗರದ ಉಳಿದ ಕ್ವಾರಿಗಳಿಗೆ ನೊಟೀಸ್ ನೀಡಿದ್ದರೂ ಅಕ್ರಮ ಕ್ವಾರಿಗೆ ನೋಟಿಸ್ ನೀಡಿಲ್ಲ. ಒಂದು ಸಾವಿರ ಲೋಡ್ ಮರಳನ್ನು ಕಾಟಿಂಗ್ ಮಾಡಿ ಹಾಕಲಾಗಿದೆ. ಶರಾವತಿ ನದಿ ಬಗೆದು ಅಕ್ರಮ ಚಟುವಟಿಕೆ ಮಾಡಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅರಣ್ಯ ಪ್ರದೇಶವನ್ನು ನಾಶ ಮಾಡಿ ಈ ಕೃತ್ಯ ಎಸಗಲಾಗುತ್ತಿದೆ ಎಂದರು.
ಬಿಜೆಪಿಯವರಿಗೆ ಮಾತ್ರ ಲಸಿಕೆ
ಜಿಲ್ಲೆಯಲ್ಲಿ ಲಸಿಕೆ ಕೋವಿಡ್ ಲಸಿಕೆ ಮತ್ತು ಆಹಾರ ಕಿಟ್ ಬಿಜೆಪಿಯವರಿಗೆ ಮಾತ್ರ ಎನ್ನುವಂತಾಗಿದೆ. ಈ ಎಲ್ಲಾ ಅಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಜಿಲ್ಲಾಧಿಕಾರಿ ಸಂಸದರ ಅಣತಿಯಂತೆ ಪಕ್ಷಪಾತಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನದಂತಹ ಸಂಕಷ್ಟದಲ್ಲಿ ಪಕ್ಷ, ಜಾತಿ ನೋಡಬಾರದು ಇಂತಹ ಜನವಿರೋಧಿ ಚಟುವಟಿಕೆ ತಡೆಹಾಕಲು ಜಿಲ್ಲಾಧಿಕಾರಿಗೆ ಆಸಕ್ತಿ ಇಲ್ಲ ಅವರು ಸಂಸದರ ಕೈಗೊಂಬೆಯಾಗಿದ್ದಾರೆ ಎಂದು ಬೇಳೂರು ದೂರಿದರು.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ಬಡವರು ಕೊರೊನಾಕ್ಕೆ ತುತ್ತಾಗಿದ್ದಾರೆ. ಖಾಸಗಿ ಆಸ್ಪತ್ರೆಗಳೊಂದಿಗೆ ಕೈಜೋಡಿಸುತ್ತಿರುವ ಮೆಗ್ಗಾನ್‍ನ ಕೆಲ ವೈದ್ಯರು ಬಡವರಿಗೆ ವಂಚನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯ ತವರು ಜಿಲ್ಲೆಯಲ್ಲಿ ಕೊರೊನ ನಿರ್ವಹಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಇಲ್ಲಿನ ಸಾವಿನ ಸಂಖ್ಯೆಯಲ್ಲಿಯೂ ಸುಳ್ಳು ದಾಖಲೆ ತೋರಿಸಲಾಗಿದೆ. ಸಾಗರದಲ್ಲಿ ಆರೋಗ್ಯ ಇಲಾಖೆ ನಿವೃತ್ತ ನೌಕರರೊಬ್ಬರು ಬಿಜೆಪಿಯವರಿಗೆ ಮಾತ್ರ ಲಸಿಕೆ ಹಾಕಿಸುತ್ತಿದ್ದಾರೆ. ಹೊಸನಗರದಲ್ಲಿ ಜನರ ತೆರಿಗೆ ಹಣದಲ್ಲಿ ಕೊಡುತ್ತಿರುವ ಆಹಾರ ಕಿಟ್‍ಗಳಲ್ಲಿಯೂ ತಾರತಮ್ಯ ಎಸಗಲಾಗಿದೆ ಎಂದು ಅವರು ಆರೋಪಿಸಿದರು.