ಕೆಪಿಸಿಟಿಎಲ್ ನೋಡಲ್ ಅಧಿಕಾರಿ ಕುಮುದಾ ಅವರು ತಮ್ಮ ಇಲಾಖೆ ಬಗ್ಗೆ ಸರಿಯಾಗಿ ಮಾಹಿತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಡಿಮಿಡಿಗೊಂಡ ಶಾಸಕ ಕುಮಾರ್ ಬಂಗಾರಪ್ಪ ಅವರು ಕರ್ತವ್ಯದಿಂದ ಅಮಾನತು ಮಾಡುವಂತೆ ಸಂಬಂಧಿಸಿದ ಮೇಲಧಿಕಾರಿಗಳಿಗೆ ಸೂಚಿಸಿದರು.
ಸೊರಬ: ಶುಕ್ರವಾರ ಪಟ್ಟಣದ ರಂಗ ಮಂದಿರದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕೆಪಿಟಿಸಿಎಲ್ ನೋಡಲ್ ಅಧಿಕಾರಿಯಾಗಿ ನಿಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ ಎಂದು ಕುಮುದಾ ಅವರನ್ನು ಶಾಸಕರು ಪ್ರಶ್ನೆಸಿದಾಗ ಸಮಂಜಸ ಉತ್ತರ ನೀಡುವ ಬದಲು ಉಡಾಫೆಯಿಂದ ವರ್ತಿಸಿದ್ದರಿಂದ ಕೂಡಲೇ ಶಾಸಕರು ದೂರವಾಣಿ ಮೂಲಕ ಮೇಲಧಿಕಾರಿಗಳನ್ನು ಸಂಪರ್ಕಿಸಿ ಅಮಾನತು ಮಾಡುವಂತೆ ತಿಳಿಸಿದರು.
ಪಿಡಬ್ಲ್ಯುಡಿ ಎಂಜನಿಯರ್ ಉಮಾನಾಯ್ಕ್ ಮಾತನಾಡಿ, ಆನವಟ್ಟಿ ಮೆಸ್ಕಾಂ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಕುಪ್ಪಗಡ್ಡೆ ಶಾಖೆಯ ಉದ್ರಿಯಿಂದ ಕುಪ್ಪಗಡ್ಡೆ ಮಾರ್ಗವಾಗಿ ಕುಂಬ್ರಿಗೆ 11 ಕೆವಿ ವಿದ್ಯುತ್ ತಂತಿ ಅಳವಡಿಸಿಲು ಕಂಬಗಳನ್ನು ರಸ್ತೆಯ ಬದಿಯಲ್ಲಿಯೇ ನಿರ್ಮಿಸಿ, ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ. ಜೊತೆಗೆ ಪಿಡಬ್ಲ್ಯುಡಿ ಇಲಾಖೆಯ ಅನುಮತಿಯನ್ನು ಸಹ ಪಡೆಯದೇ ಬೇಕಾಬಿಟ್ಟಿ ಕಾಮಗಾರಿ ನಡೆಸಲಾಗುತ್ತಿದೆ. ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಂದ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ಪ್ರತಿಕ್ರಿಯಿಸಿದ ಶಾಸಕರು, ಇಲಾಖೆಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳುವ ಬದಲು ಸಾರ್ವಜನಿಕರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ನೋಟಿಸ್ ನೀಡಿರುವ ಮೆಸ್ಕಾಂ ಅಧಿಕಾರಿಗಳ ಕಾರ್ಯ ವೈಖರಿ ಖಂಡನೀಯ. ಗುತ್ತಿಗೆದಾರರ ಹಿತಕಾಯುವ ಉದ್ದೇಶದಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳ ಸೂಚನೆಯನ್ನು ದಿಕ್ಕರಿಸಲಾಗಿದೆ. ಕೂಡಲೇ ಆ ಪ್ರದೇಶದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸಂಬಂಧಿಸಿದ ಕಾಮಗಾರಿಗೆ ಬಿಲ್ ಪಾವತಿಸದಂತೆ ಮೇಲಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ತಿಳಿಸುವ ಜೊತೆಗೆ ಆನವಟ್ಟಿ ಮೆಸ್ಕಾಂ ಎಇಇ ಮಂಜಪ್ಪ ವಿರುದ್ಧ ಕಿಡಿಕಾರಿದರು.
ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಜರುಗಬೇಕಿದೆ. ಕಾನಕೇರಿ ಬಡಾವಣೆಯಲ್ಲಿ ದ್ವಿಪಥ ರಸ್ತೆಯ ನಡುವೆ ಸಸಿಗಳನ್ನು ನೆಡುವುದು. ಸರ್ವೆ 113ರಲ್ಲಿ ಗ್ರಂಥಾಲಯಕ್ಕೆ ಕಾಯ್ದಿರಿಸಿದ ಜಾಗದ ಪಕ್ಕದ ಒಂದು ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಮಾಡಬೇಕು. ಬೆಳೆಯುತ್ತಿರುವ ಪಟ್ಟಣಕ್ಕೆ ಭವಿಷ್ಯದ ದೃಷ್ಟಿಯಿಂದ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಪಟ್ಟಣದ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಸಿಬ್ಬಂದಿ ನಿಯೋಜಿಸುವಂತೆ ತಿಳಿಸಿದ ಅವರು, ಗ್ರಾಮೀಣ ಭಾಗದಲ್ಲಿ ಪಾರಂಪರಿಕವಾಗಿ ಅರಣ್ಯ ಪ್ರದೇಶದಲ್ಲಿಯೇ ಜನತೆ ಅಂತ್ಯಕ್ರಿಯೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಂತಹ ಸುಮಾರು 42 ಸ್ಮಶಾನಗಳು ತಾಲ್ಲೂಕಿನಲ್ಲಿದ್ದು, ಅಲ್ಲಿನ ಜನರಿಗೆ ಅನುಕೂಲ ಕಲ್ಪಿಸಲು ಅರಣ್ಯ ಇಲಾಖೆಯವರು ಸಹಕರಿಸಬೇಕು ಹಾಗೂ ಸರ್ವೆ ಇಲಾಖೆಯವರು ಜಾಗವನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಕೆ.ಜಿ. ಕುಮಾರ್, ಗ್ರೇಡ್-2 ತಹಶೀಲ್ದಾರ್ ಮಂಜುಳಾ ಹೆಗಡಾಳ್, ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸೇರಿದಂತೆ ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
previous post