ಕುವೆಂಪು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ನೂತನ ಕುಲಸಚಿವರಾಗಿ ಅನುರಾಧ ಅವರು ಗುರುವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತಿ ಕುಲಸಚಿವ ಪ್ರೊ.ಎಸ್.ಎಸ್.ಪಾಟೀಲ್ ಅವರು ನೂತನ ಕುಲಸಚಿವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಕುಲಪತಿ ಪ್ರೊ.ವೀರಭದ್ರಪ್ಪ ಅವರು ಉಪಸ್ಥಿತರಿದ್ದರು.
ಶಿವಮೊಗ್ಗ ಎಡಿಸಿಯಾಗಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಅನುರಾಧಾ ಅವರನ್ನು ಸರಕಾರ ಕುವೆಂಪು ವಿವಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಪ್ರೊ.ಪಾಟೀಲ್ ಅವರನ್ನು ಈ ಹಿಂದೆಯೇ ಒಮ್ಮೆ ವರ್ಗಾವಣೆ ಮಾಡಿತ್ತಾದರೂ, ಆಗ ಒಂದೇ ದಿನದಲ್ಲಿ ತಮ್ಮ ವರ್ಗಾವಣೆ ಆದೇಶವನ್ನು ಪಾಟೀಲ್ ಅವರು ರದ್ದು ಮಾಡಿಸಿ ಅದೇ ಹುದ್ದೆಯಲ್ಲಿ ಮುಂದುವರಿದಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಿರಿಯ ಶ್ರೇಣಿ ಕೆ.ಎ.ಎಸ್ ಅಧಿಕಾರಿಯಾಗಿರುವ ಅನುರಾಧಾ ಅವರು ಶಿವಮೊಗ್ಗ ಎಡಿಸಿಯಾಗಿ ಕರ್ತವ್ಯ ಮಾಡುವ ಮೂಲಕ ಜನ ಪ್ರೀತಿ ಗಳಿಸಿದ್ದರು. ಈಗ ಶಿಕ್ಷಣ ಕ್ಷೇತ್ರದ ಆಡಳಿತಾತ್ಮ ಜವಾಬ್ದಾರಿ ವಹಿಸಿಕೊಂಡಿದ್ದಾರೆ.