Malenadu Mitra
ರಾಜ್ಯ ಶಿವಮೊಗ್ಗ

ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ಸೂಕ್ತ ಪರಿಹಾರಕ್ಕೆ ಕ್ರಮ: ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ 491 ಕೋಟಿ ರೂ. ಹಾನಿ ಅಂದಾಜಿಸಲಾಗಿದ್ದು, ಹಾನಿಗೀಡಾದ ಕೃಷಿ ಭೂಮಿಗೆ ಹೆಚ್ಚುವರಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎನ್ ಜಿ ಆರ್ ಎಫ್ ಮಾರ್ಗಸೂಚಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೋವಿಡ್ ಎದುರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿದರು.

ಅತಿವೃಷ್ಟಿಯಿಂದ ನಾಲ್ಕು ಮಂದಿ ಮೃತಪಟ್ಟಿದ್ದು, ತಲಾ 5ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. 27 ಜಾನುವಾರುಗಳು ಸಾವಿಗೀಡಾಗಿವೆ. 126 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, 478 ಮನೆಗಳಿಗೆ ತೀವ್ರ ಹಾನಿ, 532 ಮನೆಗಳಿಗೆ ಭಾಗಶಃ ಹಾಗೂ ಜಾನುವಾರುಗಳ 76 ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದೆ. 1174 ಹೆಕ್ಟೇರ್ ಕೃಷಿ ಜಮೀನಿನಲ್ಲಿ ಮರಳು ತುಂಬಿ ಹಾನಿಗೀಡಾಗಿದ್ದು, ಎನ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ 1.43 ಕೋಟಿ ರೂ. ಪರಿಹಾರ ನೀಡಬೇಕಾಗಿದೆ. ಈ ಪರಿಹಾರ ತುಂಬಾ ಕಡಿಮೆಯಾಗಿದ್ದು, ಇದನ್ನು ಪರಿಷ್ಕರಿಸುವ ಕುರಿತು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸಂಪೂರ್ಣ ಹಾನಿಗೀಡಾಗಿರುವ ಮನೆಗಳಲ್ಲಿದ್ದವರಿಗೆ ಪರ್ಯಾಯ ವ್ಯವಸ್ಥೆ ಆಗುವ ತನಕ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಬೇಕು. ಅಂತವರಿಗೆ ಮಾಸಿಕ ಬಾಡಿಗೆ ಒದಗಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮನೆ ಹಾನಿಗೀಡಾದವರಿಗೆ ಪರಿಹಾರ ಒದಗಿಸಲು ಹಕ್ಕುಪತ್ರ ಸಮಸ್ಯೆ ಎದುರಾಗುತ್ತಿದ್ದು, ಈ ಕುರಿತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಭೆಯನ್ನು ಕರೆದು ಚರ್ಚಿಸಲಾಗುವುದು ಎಂದರು.

ಅತಿವೃಷ್ಟಿಯಿಂದ ಅಂದಾಜು 7541 ಹೆಕ್ಟೇರ್ ಕೃಷಿ ಭೂಮಿಗೆ ಹಾನಿ ಅಂದಾಜಿಸಲಾಗಿದೆ. ಇದರಲ್ಲಿ ಭತ್ತ 4086 ಹೆ, ಮೆಕ್ಕೆ ಜೋಳ 773 ಹೆ, ಶುಂಠಿ 911 ಹೆಕ್ಟೇರ್ ಸೇರಿದೆ. 199 ಕಿಮಿ ಮುಖ್ಯರಸ್ತೆಗಳು, 441 ಕಿಮಿ ಜಿಲ್ಲಾ ರಸ್ತೆಗಳು, 148ಕಿಮಿ ನಗರ ರಸ್ತೆಗಳು, 210 ಸೇತುವೆಗಳು ಮತ್ತು 211 ಟ್ರಾನ್ಸ್ ಫಾರ್ಮರ್ ಗಳು, 2033 ಕಂಬಗಳು ಸೇರಿದಂತೆ 42 ಕಿಮಿ ಲೈನ್ ಹಾನಿಗೀಡಾಗಿವೆ. 328 ಕೆರೆಗಳಿಗೆ ಹಾನಿ ಉಂಟಾಗಿದ್ದು, ಸಣ್ಣಪುಟ್ಟ ಹಾನಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಳ್ಳಬೇಕು. ಹಾನಿಗೀಡಾಗಿರುವ ಕೆರೆಗಳ ಕುರಿತು ಸಂಪೂರ್ಣ ಸಮೀಕ್ಷೆ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಶಾಸಕರಾದ ಹರತಾಳು ಹಾಲಪ್ಪ, ಅಶೋಕ ನಾಯ್ಕ್, ಆಯನೂರು ಮಂಜುನಾಥ್, ಪ್ರಸನ್ನ ಕುಮಾರ್, ರುದ್ರೇಗೌಡ, ಮಹಾನಗರ ಪಾಲಿಕೆ ಅಧ್ಯಕ್ಷೆ ಸುನಿತಾ ಅಣ್ಣಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಡಿ.ಎಸ್.ಅರುಣ್, ದತ್ತಾತ್ರೇಯ, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Ad Widget

Related posts

ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಮುಖಭಂಗ, ಏಳರಲ್ಲಿ ಕಾಂಗ್ರೆಸ್, ಎರಡು ಜೆಡಿಎಸ್ ಹಾಗೂ ಒಂದರಲ್ಲಿ ಬಿಜೆಪಿ

Malenadu Mirror Desk

ಸುಖ ಭೋಗದ ಬೆನ್ನು ಹತ್ತಿದರೆ ಅನಾರೋಗ್ಯ ಖಂಡಿತ, ಯೋಗ ದಿನಾಚರಣೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಎಚ್ಚರಿಕೆ

Malenadu Mirror Desk

ಮೇ 15 ರಿಂದ ಭದ್ರಾ ನಾಲೆಗಳಿಗೆ ನೀರು ಬಂದ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.