ಶಿವಮೊಗ್ಗ ಮೂಲ ಸೌಕರ್ಯಗಳ ಅಸಮರ್ಪಕ ನಿರ್ವಹಣೆ ಹಾಗೂ ಹೆಚ್ಚುತ್ತಿರುವ ಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಗೋಪಾಲಗೌಡ ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ನಿವಾಸಿಗಳು ಪಾಲಿಕೆಗೆ ಸಕಾಲಕ್ಕೆ ಸರಿಯಾಗಿ ತೆರಿಗೆ ಪಾವತಿಸುತ್ತಿದ್ದು, ನಗರದ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಈ ಎರಡೂ ಬಡಾವಣೆಗಳು ವಿಶಾಲ ವ್ಯಾಪ್ತಿ ಹೊಂದಿದ್ದು, ಮಹಾನಗರ ಪಾಲಿಕೆಯ ಅಸಮರ್ಪಕ ಹಾಗೂ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಇಲ್ಲಿನ ನಿವಾಸಿಗಳು ಪ್ರತಿದಿನ ಸಂಕಷ್ಟ ಎದುರಿಸುವಂತಾಗಿದೆ ಎಂದರು.
೨೪ * ೭ ನೀರಿನ ವ್ಯವಸ್ಥೆ ಇತ್ತೀಚೆಗಷ್ಟೇ ಕಲ್ಪಿಸಿದ್ದು, ಪ್ರಾಯೋಗಿಕವಾಗಿ ಈಗಾಗಲೇ ನೀರನ್ನು ಹರಿಸಿದ್ದರೂ ಕೂಡ ಕೇವಲ ಅರ್ಧ ಗಂಟೆಯಷ್ಟು ಕಾಲ ಮಾತ್ರ ನೀರು ಬರುತ್ತಿದ್ದು, ಇದರಿಂದ ನೀರಿಲ್ಲದ ಪರಿಸ್ಥಿತಿ ಉಂಟಾಗಿದ್ದು, ಕೆಲವೆಡೆ ವಾರಕ್ಕೆರಡು ಬಾರಿ ಮಾತ್ರ ನೀರು ಬರುತ್ತದೆ. ಆದ್ದರಿಂದ ಹಳೆ ಪದ್ದತಿಯನ್ನೇ ಮುಂದುವರೆಸಲು ಕ್ರಮಕೈಗೊಳ್ಳಬೇಕು. ಕಳ್ಳತನ, ರಸ್ತೆ ದರೋಡೆ, ವಾಹನ, ಮೊಬೈಲ್ ಕಳ್ಳತನ ಹೆಚ್ಚುತ್ತಿದ್ದು, ಪೊಲೀಸ್ ಬಂದೋಬಸ್ತ್ ಹೆಚ್ಚಿಸಿ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.
ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಇಲ್ಲದೇ ಬೀದಿ ದೀಪಗಳು ಹಾಳಾಗಿದ್ದು, ಇದರಿಂದ ಅಪರಾಧ ಹಾಗೂ ಅನೈತಿಕ ಚಟುವಟಿಕೆ ಹೆಚ್ಚಾಗಿದ್ದು, ನಾಗರಿಕರು ಭಯಪಡುವಂತಾಗಿದೆ. ಮನೆ ಮನೆ ಕಸ ಸಂಗ್ರಹಣಾ ವಾಹನ ಸೂಕ್ತ ಸಮಯಕ್ಕೆ ಬಾರದೇ ನಿವಾಸಿಗಳು ಎಲ್ಲೆಂದರಲ್ಲಿ ಕಸವನ್ನು ಎಸೆಯುವುದರಿಂದ ಬಡಾವಣೆ ದುರ್ನಾತ ಬೀರುತ್ತಿದೆ. ಈಗಿರುವ ಸ್ವಚ್ಛತಾ ಸಿಬ್ಬಂದಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದೇ ಇರುವುದರಿಂದ ಸ್ವಚ್ಛತೆಗೆ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಕೆಲವು ಬ್ಲಾಕ್ ಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ತಕ್ಷಣ ರಸ್ತೆ ಕಾಮಗಾರಿ ಕೈಗೊಳ್ಳಬೇಕು., ಬಾಕ್ಸ್ ಚರಂಡಿಗಳಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು. ಕೂಡಲೇ ಮಹಾನಗರ ಪಾಲಿಕೆ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರದೇ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ವೇದಿಕೆ ಆಗ್ರಹಿಸಿದೆ.
ಪ್ರಮುಖರಾದ ಜಿ.ಡಿ. ಮಂಜುನಾಥ, ಗೀತೇಂದ್ರ ಗೌಡ, ರಾಜಶೇಖರ್, ಜಗನ್ನಾಥ್, ಎಂ. ರಾಜು, ಎಸ್.ಸಿ. ರಾಮಚಂದ್ರ, ಬಸವನಗೌಡ, ಶಂಕರಪ್ಪ, ನಾಗೇಶ್, ಮುರಳೀಧರ, ರವಿಕುಮಾರ್, ನಿಂಗರಾಜ್, ಸುಧಾಕರ್ ಮೊದಲಾದವರಿದ್ದರು.