ಸಹ್ಯಾದ್ರಿ ವಿಜ್ಞಾನ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಡಿ.ಎಚ್.ಶಂಕರಮೂರ್ತಿ ಸಲಹೆ
ಶಿವಮೊಗ್ಗ,ಆ.೨೧: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಚಟುವಟಿಕೆಗಳಿಗೆ ದೇಶದೆಲ್ಲೆಡೆ ಇರುವ ಹಳೆ ವಿದ್ಯಾರ್ಥಿಗಳ ಸಹಾಯ ಪಡೆಯಲು ಸೂಕ್ತ ಕಾರ್ಯಯೋಜನೆ ರೂಪಿಸಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರೂ ಆದ ಡಿ.ಎಚ್.ಶಂಕರಮೂರ್ತಿ ಹೇಳಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಓದುವ ದಿನಗಳಿಂದ ಈ ತನಕ ತನ್ನ ಹೆಗ್ಗಳಿಕೆ ಕಾಯ್ದುಕೊಂಡಿರುವ ವಿಜ್ಞಾನ ಕಾಲೇಜಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರದ ಪ್ರತಿನಿಧಿಗಳನ್ನು ಸಂಪರ್ಕ ಮಾಡಬೇಕಾಗಿದೆ. ಖೇಲೋ ಇಂಡಿಯಾದ ವಿಶೇಷ ತರಬೇತಿ ಕೇಂದ್ರ ನಿರ್ಮಾಣದಿಂದ ಕ್ಯಾಂಪಸ್‌ನ ಮೂರೂ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಾದರೆ ಸರಿ. ಇಲ್ಲವಾದರೆ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಂಬಂಧಿತರಿಂದ ಮಾಹಿತಿ ಪಡೆದುಕೊಳ್ಳಬೇಕು. ಈ ಬಗ್ಗೆ ಕುವೆಂಪು ವಿಶ್ವವಿದ್ಯಾಲಯ ಅಧಿಕಾರಿಗಳಿಂದ ಮಾಹಿತಿ ಪಡೆಯುವಂತೆ ಹೇಳಿದರು.
ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಳುಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಕಾಲೇಜಿಗೆ ಕರೆಸಿ ವಿದ್ಯಾರ್ಥಿಗಳ ಸ್ಫೂರ್ತಿ ಹೆಚ್ಚಿಸುವ ಕೆಲಸ ಮಾಡಬೇಕು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಮಗ್ರ ಬೆಳವಣಿಗೆಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದರು.
ಸಂಘದ ಉಪಾಧ್ಯಕ್ಷ ಹಾಗೂ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ ಅವರು ಮಾತನಾಡಿ, ನಾವು ಕಲಿತ ಕಾಲೇಜಿನ ಶ್ರೇಯಸ್ಸಿಗೆ ಬದ್ಧರಾಗಿದ್ದು, ಹಳೇ ವಿದ್ಯಾರ್ಥಿಗಳ ಸಂಘವನ್ನು ಹೆಚ್ಚು ಕ್ರಿಯಾಶೀಲಗೊಳಿಸಬೇಕು. ವಿಶೇಷ ಕ್ರೀಡಾ ತರಬೇತಿ ಕೇಂದ್ರ ಶಿವಮೊಗ್ಗಕ್ಕೆ ಒಂದು ಪ್ರತಿಷ್ಠಿತ ಯೋಜನೆಯಾಗಿದೆ. ಸಹ್ಯಾದ್ರಿ ಕ್ಯಾಂಪಸ್‌ನಲ್ಲಿಯೇ ಆರಂಭಿಸುವ ಕುರಿತ ಪ್ರಕ್ರಿಯೆಗಳು ಈಗಾಗಲೇ ಚಾಲ್ತಿಯಲ್ಲಿವೆ ಎಂದರು.
ವಿದ್ಯಾರ್ಥಿಸಂಘದ ಅಧ್ಯಕ್ಷರೂ ಹಾಗೂ ಪ್ರಾಚಾರ್ಯರೂ ಆದ ಪ್ರೊ.ವಾಗ್ದೇವಿ ಅವರು ಸಂಘದ ನೋಂದಣಿ, ಮುಂದೆ ಮಾಡಬೇಕಿರುವ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕೊಠಡಿಗಳಿಲ್ಲ. ಈ ದಿಸೆಯಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯಬೇಕೆಂದು ಹೇಳಿದರು. ಕಾರ್ಯದರ್ಶಿ ಡಾ.ನಾಗರಾಜ್ ಪರಿಸರ ಮಾತನಾಡಿ, ಹಳೇ ವಿದ್ಯಾರ್ಥಿಗಳ ಸಂಘ ಹೊಸದಾಗಿ ನೋಂದಣಿಯಾಗಿದ್ದು, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳಲ್ಲಿರುವವರನ್ನು ಸಂಪರ್ಕಿಸಿ ಕಾಲೇಜಿನ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ಮನವಿ ಮಾಡಬೇಕಾಗಿದೆ ಎಂದು ಹೇಳಿದರು.
ಸಹಕಾರ್ಯದರ್ಶಿ ಉಮೇಶ್ ಶಾಸ್ತ್ರಿ, ಸಂಘದ ನಿರ್ದೇಶಕರುಗಳಾದ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ, ಪ್ರಾಧ್ಯಾಪಕರುಗಳಾದ ರವಿಕುಮಾರ್, ಡಾ.ಕೆ.ಎಲ್. ನಾಯ್ಕ್, ಡಾ.ಲತಾ ಕೆ.ಪಿ, ರೂಪ, ನಾಗರಾಜ್ ಎಸ್, ಜೇಸುದಾಸ್ ಮತ್ತಿತರರು ಭಾಗವಹಿಸಿದ್ದರು.