ಹಿರಿಯ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡದೆ ಕೇವಲ ಪ್ರಗತಿಯ ವರದಿ ಕೇಳುತ್ತಿದ್ದಾರೆಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಸೇರಿ ಹಲವರ ಮೊಬೈಲ್‌ಗೆ ಮೆಸೇಜ್ ಹಾಕಿ ನಾಪತ್ತೆಯಾಗಿದ್ದ ಡಿಸಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಗಿರಿರಾಜ್ (೩೯) ಇನ್ನು ಪತ್ತೆಯಾಗಿಲ್ಲ. ಮಂಗಳವಾರ ಮನೆಯಿಂದ ಹೊರಟ ಮೇಲೆ ಬಸ್ ನಿಲ್ದಾಣದ ಸಮೀಪದ ಎಟಿಎಂನಲ್ಲಿ ೧೫ ಸಾವಿರ ಹಣ ಬಿಡಿಸಿಕೊಂಡ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಸೇರಿದಂತೆ ಕಛೇರಿಯ ಸಿಬ್ಬಂದಿಗಳ ವಾಟ್ಸ್ ಆಪ್ಯ್ ಗ್ರೂಪ್‌ಗೆ ಮೆಸೇಜ್ ಮಾಡಿ ನಾಪತ್ತೆಯಾಗಿರುವ ಗಿರಿರಾಜ್ ಅವರನ್ನು ಹುಡುಕುವ ಕಾರ್ಯ ಸಾಗಿದೆ. ಅವರ ಮೊಬೈಲ್ ಟವರ್ ಕೊನೆಯದಾಗಿ ಭದ್ರಾವತಿ ತಾಲೂಕಿನ ಎಂ.ಸಿ. ಹಳ್ಳಿ ಬಳಿ ಸ್ವಿಚ್ ಆಫ್ ಆಗಿದ್ದು, ಆ ಕಡೆಯೇ ಹೋಗಿರುವುದಾಗಿ ಹೇಳಲಾಗುತ್ತಿದೆ. ಆದರೆ, ಇನ್ನೂ ಖಚಿತ ಮಾಹಿತಿ ಪೊಲೀಸರಿಗೂ ಲಭ್ಯವಾಗಿಲ್ಲ.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಮೂಲದ ಗಿರಿರಾಜ್ ಅವರು ಅತ್ಯಂತ ಸೌಮ್ಯ ಸ್ವಭಾವದರಾಗಿದ್ದು, ಶಿವಮೊಗ್ಗದ ಬಸವನಗುಡಿಯಲ್ಲಿ ತಾಯಿ, ಪತ್ನಿ ಹಾಗೂ ಮಗಳೊಂದಿಗೆ ಇವರು ವಾಸವಾಗಿದ್ದರು. ನಾಪತ್ತೆಯಾಗಿರುವ ಗಿರಿರಾಜ್ ಅವರಿಗಾಗಿ ಎಂ.ಸಿ.ಹಳ್ಳಿ ಸುತ್ತಮುತ್ತ ತಹಸೀಲ್ದಾರ್ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ಎಂಸಿ ಹಳ್ಳಿ ಚಾನಲ್ ಸುತ್ತಮುತ್ತ ಜಯನಗರ ಹಾಗೂ ಭದ್ರಾವತಿ ಪೊಲೀಸರ ಒಂದು ತಂಡ ಗಿರಿರಾಜ್‌ಗಾಗಿ ಹುಡುಕಾಟ ನಡೆಸುತ್ತಿದೆ. ಇನ್ನೊಂದು ತಂಡ ಬಸ್ ಸ್ಟಾಂಡ್‌ನಲ್ಲಿ ಹಣ ಬಿಡಿಸಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದು, ಈ ಸಂಬಂಧ ಸುತ್ತಮುತ್ತಲಿನ ಸಿಸಿ ಟಿವಿಗಳನ್ನು ಪರಿಶೀಲಿಸುತ್ತಾ, ಮುಂದಿನ ತನಿಖೆಯನ್ನು ಕೈಗೊಂಡಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್‌ಪಿ ಖುದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯ ಹಂತಗಳನ್ನು ಗಮನಿಸುತ್ತಿದ್ದಾರೆ. ಇನ್ನೊಂದೆಡೆ ಗಿರಿರಾಜ್ ಆಗಮನಕ್ಕಾಗಿ ಕಾಯುತ್ತಿರುವ ಅವರ ಕುಟುಂಬ, ಈ ಸಂಬಂಧ ಮಿಸ್ಸಿಂಗ್ ಕಂಪ್ಲೇಂಟ್ ಕೂಡ ದಾಖಲು ಮಾಡಿದ್ದು, ಎಲ್ಲಿದ್ದರೂ ಮನೆಗೆ ಬನ್ನಿ ಎಂದು ಮನವಿಮಾಡಿಕೊಂಡಿದೆ.