ನಾಡ ಹಬ್ಬ ದಸರೆಯ ಅಂಗವಾಗಿ ಮಲೆನಾಡಿನಾದ್ಯಂತ ಗುರುವಾರ ಆಯುಧ ಪೂಜಾವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪ್ರಮುಖ ದೇವಾಲಯಗಳಲ್ಲಿ ನವಮಿಯ ಅಂಗವಾಗಿ ಚಂಡಿಕಾ ಹೋಮ ನಡೆದವು. ಅಂಗಡಿ ಮುಂಗಟ್ಟಿನಲ್ಲಿ ಲಕ್ಷ್ಮಿ ಪೂಜೆ ಹಾಗೂ ಅನ್ನ ಕೊಡುವ ಉದ್ಯಮದಲ್ಲಿನ ಯಂತ್ರೋಪಕರಣಗಳನ್ನು ಪೂಜೆ ಮಾಡಲಾಯಿತು. ಅಂಗಡಿಗಳು, ಕೈಗಾರಿಕೆ, ಸೇರಿದಂತೆ ಜನರು ತಾವು ವಹಿವಾಟು ಮಾಡುವ ಪ್ರದೇಶದಲ್ಲಿ ಹೂ ಅಲಂಕಾರ ಮಾಡಿ ಪೂಜೆ ನೆರೆವೇರಿಸಿದರು. ಕೊರೊನ ಕಾರಣದಿಂದ ಏನೇ ನಷ್ಟ ಅನುಭವಿಸಿದ್ದರೂ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು. ವಾಹನಗಳನ್ನು ಸಿಂಗರಿಸಿಕೊಂಡು ಮನೆಮಂದಿಯೊಂದಿಗೆ ಕೂಡಿ ಪೂಜಾ ಕಾರ್ಯ ನೆರೆವೇರಿಸಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರು ಅತ್ಯಂತ ಸಂಭ್ರಮದಿಂದ ಪೂಜೆಯಲ್ಲಿ ತೊಡಗಿಸಿಕೊಂಡಿದ್ದರು. ಸಾರಿಗೆ ಬಸ್‌ಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಟೋ ನಿಲ್ದಾಣಗಳಲ್ಲಿ ಎಲ್ಲೆಂದರಲ್ಲಿ ಸಿಂಗಾರಗೊಂಡಿರುವ ದೃಶ್ಯಗಳು ಕಂಡು ಬಂದವು.
ಮೆರವಣಿಗೆ:
ಶಿವಮೊಗ್ಗ ನಗರದಲ್ಲಿ ಶುಕ್ರವಾರ ವಿಜಯ ದಶಮಿಯ ಅಂಗವಾಗಿ ಅಂಬಾರಿಯಲ್ಲಿ ರಾಜರಾಜೇಶ್ವರಿ ಮೂರ್ತಿಯ ರಾಜಬೀದಿ ಉತ್ಸವ ನಡೆಯಲಿದೆ. ಸಕ್ರೆಬೈಲಿನ ಆನೆ ಸಾಗರ್ ಅಂಬಾರಿ ಹೊರಲಿದ್ದು, ಭಾನುಮತಿ ಸಾಥ್ ನೀಡಲಿದೆ. ಮೆರವಣಿಗೆ ಕೋಟೆ ರಸ್ತೆ ಚಂಡಿಕಾಪರಮೇಶ್ವರಿ ದೇಗುಲದಿಂದ ಹೊರಟು ಎಸ್ಪಿಎಂ ರಸ್ತೆ ಗಾಂಧಿಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಜೈಲು ರಸ್ತೆ ಮೂಲಕ ಹಳೆಜೈಲು ಆವರಣಕ್ಕೆ ತಲುಪಲಿದೆ. ಅಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮವಿದೆ. ಗುರುವಾರ ಸಕ್ರೆಬೈಲಿನಿಂದ ಬಂದಿರುವ ಆನೆಗಳಿಗೆ ಮಹಾನಗರ ಪಾಲಿಕೆಯಿಂದ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಮೇಯರ್ ಸುನೀತಾ ಅಣ್ಣಪ್ಪ, ಆಯುಕ್ತ ಚಿದಾನಂದ ವಟಾರೆ, ಪಾಲಿಕೆ ಸದಸ್ಯರಾದ ಎಸ್.ಎನ್. ಚನ್ನಬಸಪ್ಪ. ಉಪಮೇಯರ್ ಗನ್ನಿ ಶಂಕರ್, ಜ್ಞಾನೇಶ್, ಅನಿತಾ ರವಿಶಂಕರ್ ,ವಿಶ್ವನಾಥ್ ಸೇರಿದಂತೆ ಅನೇಕರು ಹಾಜರಿದ್ದರು.
s