Malenadu Mitra
ರಾಜ್ಯಶಿವಮೊಗ್ಗ

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿ.ವಿಯ ಬಿ.ಜೆ.ಗಿರೀಶ್ ಮತ್ತು ಬಿ.ಇ. ಕುಮಾರಸ್ವಾಮಿಗೆ ಸ್ಥಾನ

ಸ್ಟ್ಯಾನ್‌ಫೋರ್ಡ್‌ ವಿ.ವಿ. ಮತ್ತು ಎಲ್ಸೇವಿಯರ್ ಹೊರತಂದಿರುವ ಜಾಗತಿಕ ವಿಜ್ಞಾನಿಗಳ ಪಟ್ಟಿ

ಶಂಕರಘಟ್ಟ, ಅ. 23: ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಟಾಪ್ 0. 2% ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಡಾ. ಬಿ. ಜೆ ಗಿರೀಶ್ ಮತ್ತು ಡಾ. ಬಿ. ಇ. ಕುಮಾರಸ್ವಾಮಿ ಸ್ಥಾನ ಪಡೆದಿದ್ದಾರೆ.

ಎಲ್ಸೇವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಜೆರೋಯಿನ್ ಬಾಸ್, ಕೆವಿನ್ ಬೋಯಾಕ್ ಮತ್ತು ಜಾನ್ ಪಿ.ಎ. ಇವೊನ್ನಿಡಿಸ್ ಅವರನ್ನೊಳಗೊಂಡ ಸಂಶೋಧನಾ ತಂಡ ಸಿದ್ಧಪಡಿಸಿರುವ ವಿಶ್ವದ ಟಾಪ್ 2% ವಿಜ್ಞಾನಿಗಳ ಡೇಟಾಬೇಸ್‌ ಅಕ್ಟೋಬರ್ 19ರಂದು ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿದೆ.

ಸಂಶೋಧನಾ ತಂಡವು ವಿಶ್ವದ ಸಂಶೋಧಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು, ಸಂಶೋಧನಾ ಉಲ್ಲೇಖಗಳು, ಸಹಲೇಖನಗಳು, ಹೆಚ್-ಇಂಡೆಕ್ಸ್ ಸೇರಿದಂತೆ ಹಲವು ಸಂಯೋಜಿತ ಮಾನದಂಡಗಳನ್ನು ಬಳಸಿ ಜಾಗತಿಕವಾಗಿ ಅತ್ಯುತ್ತಮ ಒಂದು ಲಕ್ಷ ವಿಜ್ಞಾನಿಗಳನ್ನು ಗುರುತಿಸಿ ದತ್ತಾಂಶವನ್ನು ಪ್ರಕಟಿಸಿದ್ದಾರೆ. ಪಟ್ಟಿಯು 22 ವಿಜ್ಞಾನ ವಿಷಯಗಳು ಮತ್ತು 176 ಉಪವಿಜ್ಞಾನ ವಿಷಯಗಳನ್ನು ವಿಂಗಡಿಸಿ ರಚಿಸಿರುವುದಾಗಿದ್ದು, ವೃತ್ತಿಜೀವಮಾನ ಸಾಧಕರು ಮತ್ತು 2021ನೇ ಸಾಲಿನ ಸಾಧಕರು ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ.

2021ರ ಸಾಲಿನ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ 54804ನೇ ಸ್ಥಾನವನ್ನು ಪಡೆದಿರುವ ವಿವಿಯ ಗಣಿತವಿಜ್ಞಾನ ಸಹಪ್ರಾಧ್ಯಾಪಕ ಡಾ. ಬಿ.ಜೆ. ಗಿರೀಶ್ ಇಂಜಿನಿಯರಿಂಗ್, ಅನ್ವಯಿಕ ಭೌತಶಾಸ್ತ್ರ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್‌ ವಿಷಯಗಳ ಕುರಿತ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಇನ್ನು ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸಹ ಪ್ರಧ್ಯಾಪಕ ಡಾ. ಬಿ. ಇ. ಕುಮಾರಸ್ವಾಮಿ 165713ನೇ ಸ್ಥಾನದಲ್ಲಿದ್ದಾರೆ.

ಈ ವರ್ಷದ ಪಟ್ಟಿಯಲ್ಲಿ ಭಾರತದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸುಮಾರು 2042 ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ 1900 ವಿಜ್ಞಾನಿಗಳು ಸ್ಥಾನ ಪಡೆದಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc.) 114 ವಿಜ್ಞಾನಿಗಳು ಈ ಪಟ್ಟಿಯಲ್ಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿವಿಯ ಸಂಶೋಧನಾ ಸಾಧನೆಗೆ ಪೂರಕವಾದ ಕಾರ್ಯ ಮಾಡುತ್ತಿರುವ ಈ ಇಬ್ಬರು ಅಧ್ಯಾಪಕರ ಸಾಧನೆಯು ಕುವೆಂಪು ವಿವಿಗೆ ಹೆಮ್ಮೆ ತಂದಿದೆ ಎಂದು ವಿವಿಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಮತ್ತು ಕುಲಸಚಿವೆ ಜಿ. ಅನುರಾಧ ಅವರು ಅಭಿನಂದಿಸಿದ್ದಾರೆ.

Ad Widget

Related posts

ಬಿಜೆಪಿ 42 ನೇ ಸಂಸ್ಥಾಪನಾ ದಿನಾಚರಣೆ: ಶೋಭಾಯಾತ್ರೆ

Malenadu Mirror Desk

ಬಿಜೆಪಿದು ಸರ್ವಾಧಿಕಾರಿ ಸರಕಾರ

Malenadu Mirror Desk

ಕಳಸವಳ್ಳಿಯಲ್ಲಿ ಅಕ್ರಮ ನಾಟಾ ಕಡಿತಲೆ, ಸಂಚಾರಿ ಅರಣ್ಯದಳದ ದಾಳಿ, ದೇವಾಲಯ ಕಾರ್ಯದರ್ಶಿ ವಿರುದ್ಧ ದೂರು
ಪ್ರಕರಣ ಮುಚ್ಚಿಹಾಕಲು ರಾಜಕೀಯ ನಾಯಕರಿಂದ ಒತ್ತಡ: ಆರೋಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.