ಹಿರಿಯ ಯೋಗಗುರು ಭಾ.ಮ. ಶ್ರೀಕಂಠ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ನಮಗೆಲ್ಲರಿಗೂ ತುಂಬಾ ಸಂತೋಷ ತಂದಿದೆ. ಅವರು ಓರ್ವ ವ್ಯಕ್ತಿಯಲ್ಲ, ಸಾವಿರಾರು ಕಾರ್ಯಕರ್ತರಿಗೆ ಯೋಗಗುರುಗಳಾಗಿ ಮಾರ್ಗದರ್ಶನ ನೀಡಿದ ಶಕ್ತಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದ ಬಿ.ಬಿ ರಸ್ತೆಯಲ್ಲಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾ.ಮ. ಶ್ರೀಕಂಠ ಅವರ ಮನೆಗೆ ಭೇಟಿ ನೀಡಿ, ನೂರಾರು ಯೋಗ ಶಿಷ್ಯರ ಸಮ್ಮುಖದಲ್ಲಿ ನಗರ ಬಿಜೆಪಿ ವತಿಯಿಂದ ಸನ್ಮಾನಿಸಿ ಅವರಿಗೆ ಸಿಹಿ ತಿನ್ನಿಸಿ ಬಳಿಕ ಅವರು ಮಾತನಾಡಿದರು.
ಭಾ.ಮ. ಶ್ರೀಕಂಠ ಅವರಿಗೆ ಪ್ರಶಸ್ತಿ ನೀಡುವುದರ ಮೂಲಕ ಆ ಪ್ರಶಸ್ತಿಗೆ ಗೌರವ ತಂದಿದೆ. ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಮೀಸಲಿಟ್ಟ ವ್ಯಕ್ತಿ. ಈ ಹಿಂದೆ ಅನೇಕ ಬಾರಿ ಅವರಿಗೆ ಪ್ರಶಸ್ತಿ ಒಲಿದು ಬಂದಿದ್ದರೂ ಸಹ ಅದನ್ನು ಪಡೆಯಲು ನಿರಾಕರಿಸಿದ್ದ ವ್ಯಕ್ತಿ ಅವರು. ಸದ್ದಿಲ್ಲದೇ ಸಮಾಜ ಸೇವೆ ಮಾಡಿ ಸಂಘಟನೆ ಮೂಲಕ ಯುವಕರಿಗೆ ಮತ್ತು ಯುವತಿಯರಿಗೆ ಯೋಗ ತರಬೇತಿ ನೀಡುವುದರ ಜೊತೆಗೆ ಸಾವಿರಾರು ಯುವಕರಿಗೆ ಮಾರ್ಗದರ್ಶಕರಾಗಿದ್ದರು ಎಂದರು
.ಯಾರು ಇದುವರೆಗೂ ಯೋಗ ಕಲಿತಿಲ್ಲವೋ ಅವರು ಯೋಗಾಭ್ಯಾಸ ಮಾಡಬೇಕು. ಯಾರು ಈಗಾಗಲೇ ಯೋಗಾಭ್ಯಾಸ ಮಾಡುತ್ತಿರುವಿರೋ ಅವರು ಹೆಚ್ಚಿನ ಸಾಧನೆ ಮಾಡಬೇಕು ಎಂಬುದೇ ನನ್ನ ಆಸೆ. ಅದೇ ನನಗೆ ಅಭಿನಂದನೆ ಎಂದು ಭಾ.ಮ. ಶ್ರೀಕಂಠ ಅವರು ಹೇಳುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಲ್ಲರೂ ಯೋಗ ಕಲಿಯುವ ಪ್ರತಿಜ್ಞೆಯನ್ನು ಇಂದೇ ಮಾಡೋಣ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಕೆ.ಇ. ಕಾಂತೇಶ್, ಪ್ರಮುಖರಾದ ನಾಗರಾಜ್, ಜ್ಞಾನೇಶ್ವರ್, ಭಾನುಮತಿ ವಿನೋದ್, ರಾಮು ಸೇರಿದಂತೆ ಆರ್.ಎಸ್. ಪ್ರಮುಖರು ಇದ್ದರು,