ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆವ ಚುನಾವಣೆಗೆ ಆಡಳಿತ ಪಕ್ಷ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಮಾಡಿದ್ದು, ಶಿವಮೊಗ್ಗ ಕ್ಷೇತ್ರದಿಂದ ನಿರೀಕ್ಷೆಯಂತೆ ಡಿ.ಎಸ್.ಅರುಣ್ ಹಾಗೂ ಚಿಕ್ಕಮಗಳೂರಿನಿಂದ ಹಾಲಿ ಸದಸ್ಯ ಎಂ.ಕೆ.ಪ್ರಾಣೇಶ್ ಹೆಸರನ್ನು ಅಖೈರುಗೊಳಿಸಲಾಗಿದೆ.
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ,ಧಾರವಾಡದಿಂದ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಅವರ ಮರುಆಯ್ಕೆಗೆ ಅವಕಾಶ ಮಾಡಿಕೊಡಲಾಗಿದೆ. ಬೀದರ್‌ನಿಂದ ಪ್ರಕಾಶ್ ಖಂಡ್ರೆ ಅವರ ಹೆಸರು ಘೋಷಣೆಯಾಗಿದೆ. ಬೆಂಗಳೂರು ಗ್ರಾಮಾಂತರದಿಂದ ನಾರಾಯಣ ಸ್ವಾಮಿ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ.
ಶಂಕರಮೂರ್ತಿ ಪ್ರಭಾವ:
ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರ ಶಿವಮೊಗ್ಗದಲ್ಲಿ ತ್ರಿಮೂರ್ತಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ಎಚ್. ಶಂಕರಮೂರ್ತಿ ಹಾಗೂ ಕೆ.ಎಸ್.ಈಶ್ವರಪ್ಪ ಅವರು ಪಕ್ಷದ ನೊಗಕ್ಕೆ ಹೆಗಲು ಕೊಟ್ಟವರು. ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು ಈಗಾಗಲೇ ಶಾಸಕರು ಹಾಗೂ ಸಂಸದರಾಗಿ ಹೆಸರು ಮಾಡಿದ್ದಾರೆ. ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್‌ಅವರು ಒಮ್ಮೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದು, ಮುಂಬರುವ ವಿಧಾನ ಸಭೆ ಚುನಾವಣೆಗೆ ಆಕಾಂಕ್ಷಿಯೂ ಆಗಿದ್ದಾರೆ. ಹಿರಿಯ ನಾಯಕ ಹಾಗೂ ಪಕ್ಷದ ಕಟ್ಟಾಳು ಶಂಕರಮೂರ್ತಿ ಅವರು ಸುಧೀರ್ಘ ೬ ಅವಧಿಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿ ಸಚಿವ, ಸಭಾಪತಿ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿ ಸಕ್ರಿಯ ರಾಜಕೀಯದಿಂದ ನೇಪಥ್ಯಕ್ಕೆ ಸರಿದಂತಾಗಿದೆ. ಆದರೆ ಅವರು ಸ್ಪರ್ಧಿಸುತಿದ್ದ ಪದವೀಧರ ಕ್ಷೇತ್ರದಿಂದ ಪುತ್ರ ಅರುಣ್ ಅವರಿಗೆ ಪಕ್ಷ ಅವಕಾಶ ನೀಡಿರಲಿಲ್ಲ. ಆ ಕ್ಷೇತ್ರವನ್ನು ಈಗ ಆಯನೂರು ಮಂಜುನಾಥ್ ಪ್ರತಿನಿಧಿಸುತ್ತಿದ್ದಾರೆ. ಈಗ ಅರುಣ್ ಅವರ ಹೆಸರು ಅಂತಿಮವಾಗಿರುವುದರಿಂದ ಮೂವರೂ ಮೇರು ನಾಯಕರ ಎರಡನೇ ತಲೆಮಾರಿಗೆ ಅಧಿಕಾರ ಹಸ್ತಾಂತರವಾಗುವ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ.
ಯುವ ಮುಂದಾಳು:
ಶಂಕರಮೂರ್ತಿ ಅವರ ಪುತ್ರ ಡಿ.ಎಸ್.ಅರುಣ್ ಚುನಾವಣಾ ರಾಜಕಾರಣದಿಂದ ದೂರ ಇದ್ದರೂ ಪಕ್ಷದ ವಲಯದಲ್ಲಿ ಸಕ್ರಿಯುವಾಗಿದ್ದು, ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಅವರಿಗೆ ಮೇಲ್ಮನೆ ಉಮೇದುವಾರಿಕೆ ಕೊಡಿಸುವಲ್ಲಿ ಶಂಕರಮೂರ್ತಿ ಯಶಶ್ವಿಯಾಗಿದ್ದಾರೆ.
ಅರುಣ್ ಅವರು ಕ್ರೀಡೆ, ಸಾಂಸ್ಕೃತಿಕ ಹಾಗೂ ಕೈಗಾರಿಕಾ ಹಾಗೂ ಸಂಘಸಂಸ್ಥೆಗಳ ಮೂಲಕ ಸಾರ್ವಜನಿಕಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಪಕ್ಷದಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಉತ್ತಮ ಹೆಸರು ಹೊಂದಿದ್ದಾರೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರಾದ ಅವರು ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಇದೇ ಮೊದಲು ಚುನಾವಣಾ ರಾಜಕಾರಣಕ್ಕೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಮೇಲ್ಮನೆ ಉಪಸಭಾಪತಿಯಾಗಿರುವ ಎಂ.ಕೆ.ಪ್ರಾಣೇಶ್ ಹಾಗೂ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮತ್ತೊಮ್ಮೆ ಕಣಕ್ಕಿದಿದ್ದಾರೆ.