Malenadu Mitra
ರಾಜ್ಯ ಶಿವಮೊಗ್ಗ

ರಾಜ್ಯದಲ್ಲೇ ಮೊದಲ ಬಾರಿಗೆ ಕಪ್ಪೆ ಹಬ್ಬ

ಶಿವಮೊಗ್ಗ ಪಶ್ಚಿಮಘಟ್ಟದ ವಿಶಿಷ್ಟ ಜೀವಪ್ರಬೇಧವಾದ ಕಪ್ಪೆಗಳ ಕುರಿತು ಹೊಸ ತಲೆಮಾರಿನಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿವಮೊಗ್ಗ ವನ್ಯಜೀವಿ ವಿಭಾಗದ ವತಿಯಿಂದ ಇದೇ ಮೊದಲ ಬಾರಿಗೆ ಕಪ್ಪೆ ಹಬ್ಬ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ. ನಾಗರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೇ ಮೊದಲ ಬಾರಿಗೆ ಕಪ್ಪೆಗಳ ಕುರಿತು ಕಪ್ಪೆ ಹಬ್ಬವನ್ನು ಶಿವಮೊಗ್ಗ ವನ್ಯಜೀವಿ ವಿಭಾಗವು ಸಾಗರ ತಾಲೂಕಿನ ಕಾರ್ಗಲ್ ನ ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಡಿ.18 ಮತ್ತು 19 ರಂದು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಎರಡು ದಿನಗಳ ಕಾಲ ನಡೆಯುವ ಕಪ್ಪೆ ಹಬ್ಬದಲ್ಲಿ ಉಭಯವಾಸಿಗಳ ಕುರಿತು ಪರಿಣಿತರ ವಿಚಾರ ಮಂಡನೆ, ಸಂವಾದ, ಸಾಕ್ಷ್ಯಚಿತ್ರ ಮತ್ತು ಛಾಯಾಚಿತ್ರ ಪ್ರದರ್ಶನ, ಫ್ರಾಗ್ ವಾಕ್ ಮುಂತಾದ ಚಟುವಟಿಕೆಗಳು ನಡೆಯಲಿವೆ ಎಂದರು.
ಜಗತ್ತಿನ ಅಪರೂಪದ ಕಪ್ಪೆ ಪ್ರಭೇದಗಳ ನೆಲೆವೀಡು ಶರಾವತಿ ಕಣಿವೆಯಲ್ಲಿಯೇ ಈ ಹಬ್ಬವನ್ನು ನಡೆಸುತ್ತಿರುವ ಮುಖ್ಯ ಉದ್ದೇಶ ಸ್ಥಳೀಯ ಜನರಿಗೆ ಕಪ್ಪೆಗಳ ಸಂತತಿಯ ವೈವಿಧ್ಯತೆ, ಒಟ್ಟಾರೆ ಜೀವ ವೈವಿಧ್ಯ ಸರಪಳಿಯಲ್ಲಿ ಅವುಗಳ ಮಹತ್ವ, ಜೀವ ವೈವಿಧ್ಯ ಸಮತೋಲನ ಕಾಪಾಡುವಲ್ಲಿ ಅವುಗಳ ಪಾತ್ರ ಮತ್ತು ಅವುಗಳ ಪರಿಸರದ ಕೊಡುಗೆಯನ್ನು ತಿಳಿಸುಕೊಡುವ ಮೂಲಕ ಕಪ್ಪೆಗಳ ಸಂತತಿ ಸಂರಕ್ಷಣೆಯ ನಿಟ್ಟಿನಲ್ಲಿ ಸ್ಥಳೀಯರನ್ನೂ ಒಳಗೊಳ್ಳುವುದಾಗಿದೆ ಎಂದರು.

ಮುಖ್ಯವಾಗಿ ಕೃಷಿಯಲ್ಲಿ ರಾಸಾಯನಿಕ ಬಳಕೆ, ಕಾಡು ನಾಶ, ಕಾಡಿನೊಳಗೆ ಮಾನವ ಹಸ್ತಕ್ಷೇಪ, ಹವಾಮಾನ ವೈಪರೀತ್ಯದಂತಹ ಕಾರಣಗಳಿಂದಾಗಿ ಪಶ್ಚಿಮಘಟ್ಟದ ಎಲ್ಲೆಡೆಯಂತೆ ಶರಾವತಿ ಕಣಿವೆಯಲ್ಲಿ ಕೂಡ ಉಭಯವಾಸಿಗಳ ಅಪರೂಪದ ಪ್ರಭೇದಗಳು ಅಳಿವಿನಂಚಿಲ್ಲಿವೆ. ಪರಿಸರದ ಆರೋಗ್ಯ ಸೂಚಕ ಜೀವಿಗಳು ಎಂದು ಗುರುತಿಸಲಾಗುವ ಕಪ್ಪೆಗಳ ಅವಸಾನ ನಿಜಕ್ಕೂ ಆತಂಕದ ಬೆಳವಣಿಗೆ. ಆ ಹಿನ್ನೆಲೆಯಲ್ಲಿ ಆ ವಿಶಿಷ್ಟ ಜೀವಿಯ ಸಂರಕ್ಷಣೆ ಮತ್ತು ಅದರ ಜೀವ ವೈವಿಧ್ಯದ ಮಹತ್ವದ ಕುರಿತು ಜನಜಾಗೃತಿಯ ಪ್ರಯತ್ನವಾಗಿ ಕಪ್ಪೆ ಹಬ್ಬ ಆಯೋಜಿಸಲಾಗಿದೆ ಎಂದರು.

ಈ ಹಬ್ಬದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಉಭಯವಾಸಿ ಸಂಶೋಧಕ ವಿಜ್ಞಾನಿ ಡಾ ಕೆ.ವಿ.ಗುರುರಾಜ್, ಉಭಯವಾಸಿ ಸಂರಕ್ಷಣಾ ತಜ್ಞ ಓಂಕಾರ್ ಪೈ, ಡಾ ಪ್ರೀತಿ ಹೆಬ್ಬಾರ್, ಡಾ. ಶೇಷಾದ್ರಿ ಕೆ ಎಸ್, ಡಿಸಿಎಫ್ ಬಿ ಎಂ ರವೀಂದ್ರ ಕುಮಾರ್, ಡಾ ವಿನೀತ್ ಕುಮಾರ್ ಮತ್ತಿತರ ತಜ್ಞರು ಉಭಯವಾಸಿಗಳ ಕುರಿತ ವಿವಿಧ ಅಧ್ಯಯನಗಳ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ನಡುವಿನ ವಿವಿಧ ಸಂಶೋಧಕರು ಕೂಡ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.

ಡಿ.೧೮ರಂದು ಬೆಳಿಗ್ಗೆ 11 ಗಂಟೆಗೆ ಕಪ್ಪೆ ಹಬ್ಬವನ್ನು ರಾಜ್ಯ ಅರಣ್ಯ ಪಡೆಯ ಮುಖ್ಯಸ್ಥರಾದ ಪಿಸಿಸಿಎಫ್ ಸಂಜಯ್ ಮೋಹನ್ ಉದ್ಘಾಟಿಸಲಿದ್ದು, ಪಿಸಿಸಿಎಫ್ (ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ) ರೀತು ಕಕ್ಕರ್ ಉಪಸ್ಥಿತರಿರಲಿದ್ದಾರೆ ಎಂದ ಅವರು, ಡಿ.19 ರ ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಗಲ್ ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್, ಶಶಿ ಸಂಪಳ್ಳಿ, ಕಾರ್ತಿಕ್ ಉಪಸ್ಥಿತರಿದ್ದರು.

Ad Widget

Related posts

ಶಿಮುಲ್ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಆನಂದ್‌ಗೆ ಸೋಲು

Malenadu Mirror Desk

ಒಂದು ವರ್ಷದಲ್ಲಿ 20 ಸಾವಿರ ಶಿಕ್ಷಕರ ನೇಮಕಸಿಗಂದೂರು ನವರಾತ್ರಿ ಉತ್ಸವದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿಕೆ

Malenadu Mirror Desk

ಪತ್ರಿಕಾ ಮಾಧ್ಯಮ ಪ್ರತಿಪಕ್ಷದಂತೆ ಕೆಲಸ ಮಾಡಬೇಕು, ಪತ್ರಿಕಾ ದಿನಾಚರಣೆ, ಅಭಿನಂದನೆ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ ಆಶಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.