ಕರ್ನಾಟಕದ ಪಶ್ಚಿಮಘಟ್ಟದಲ್ಲಿ ನPಕ್ಸಲ್ ಚಟುವಟಿಕೆ ಸಕ್ರಿಯವಾಗಿದ್ದ ಕಾಲದಲ್ಲಿ ಹೊಸಗದ್ದೆ ಪ್ರಭಾ ಎಂಬುದು ದೊಡ್ಡ ಹೆಸರು. ಹಳ್ಳಿಗಳಿಗೆ ಭೇಟಿ ನೀಡುವ ನಕ್ಸಲರ ತಂಡದಲ್ಲಿ ಬಂದೂಕು ಹೆಗಲಿಗೇರಿಸಿಕೊಂಡ ಮಹಿಳೆ ಇದ್ದಾಳೆಂದರೆ ಅದು ಹೊಸಗದ್ದೆ ಪ್ರಭಾ ಎಂದೇ ಹೇಳಲಾಗುತಿತ್ತು. ಮಲೆನಾಡಿನ ಕಾಡಿನ ಸಂಪೂರ್ಣ ಪರಿಚಯವಿದ್ದ ಪ್ರಭಾ ಪಶ್ಚಿಮ ಘಟ್ಟದಲ್ಲಿ ಸಂಘಟನೆಯ ಕ್ರಿಯಾಶೀಲ ಮತ್ತು ಕೇಡರ್ ಬೇಸಿಸ್ ಕಾರ್ಯಕರ್ತೆಯಾಗಿದ್ದಳು.
೨೦೧೦ ರಲ್ಲಿ ಹೊಸಗದ್ದೆ ಪ್ರಭಾ ಸತ್ತು ಹೋಗಿದ್ದಾಳೆ ಎಂದು ಹೇಳಲಾಗಿತ್ತು. ವರ್ಷಗಳ ಕಾಲ ಪೊಲೀಸರೂ ಇದನ್ನು ನಂಬಿದ್ದರು. ಊರಿನ ಕೆಲ ಮಂದಿ ಶ್ರದ್ದಾಂಜಲಿ ಸಭೆಯನ್ನೂ ಮಾಡಿದ್ದರು. ಆದರೆ ಈಗ ತಮಿಳು ನಾಡಿನ ಪೊಲೀಸರ ಮುಂದೆ ಶರಣಾಗಿರುವ ಮೋಸ್ಟ್ ವಾಂಟೆಡ್ ಹೊಸಗದ್ದೆ ಪ್ರಭಾ ಕರ್ನಾಟಕ ಪೊಲೀಸರಿಗೆ ನಕ್ಸಲ್ ಸಂಘಟನೆಯ ಇದ್ದ ಮಾಹಿತಿ ಅರೆಬೆಂದದ್ದು ಎಂಬುದನ್ನು ಸಾಬೀತು ಮಾಡಿದ್ದಾಳೆ.
ನಕ್ಸಲ್ ಮುಖಂಡ ಬಿಜಿ ಕೃಷ್ಣ ಮೂರ್ತಿ ಮತ್ತು ಸಾವಿತ್ರಿ ಬಂಧನದ ಬೆನ್ನಲ್ಲೆ ತಮಿಳುನಾಡಿನ ವೆಲ್ಲೂರು ಪೊಲೀಸರು ಹೊಸಗದ್ದೆ ಪ್ರಭಾಳನ್ನು ಬಂಧಿಸಿರುವುದರಿಂದ ನಕ್ಸಲ್ ಸಂಘಟನೆಗೆ ಭಾರೀ ಹಿನ್ನಡೆಯಾಗಿದೆ. ಹೊಸಗದ್ದೆ ಪ್ರಭಾ ಮತ್ತು ಬಿಜಿಕೆ ನಕ್ಸಲ್ ಚಳವಳಿಗೆ ಬಂದು ಭೂಗತವಾಗುವ ಮುನ್ನವೇ ಸತಿಪತಿಗಳಾಗಿದ್ದವರು. ಕರ್ನಾಟಕದಲ್ಲಿ ಸಂಘಟನೆಗೆ ಹಿನ್ನಡೆಯಾಗುತ್ತಿದ್ದಂತೆ ಕೇರಳ, ತಮಿಳುನಾಡು ಗಡಿಭಾಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಪ್ರಭಾ ಅನಾರೋಗ್ಯದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಈನಡುವೆ ಕೃಷ್ಣಮೂರ್ತಿ ಬಂಧನವಾಗುತ್ತಿದ್ದಂತೆ ವಿಚಲಿತಳಾದ ಹೊಸಗದ್ದೆ ಪ್ರಭಾ ತಮಿಳುನಾಡು ವೆಲ್ಲೂರು ಪೊಲೀಸರಿಗೆ ಶರಣಾಗತಿಯಾಗಿದ್ದಾಳೆ. ಪತಿ ಬಂಧನದ ನಂತರ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎಂದು ಹೇಳಲಾಗಿದೆ.
ಆಗುಂಬೆ ಸಮೀಪದ ಗ್ರಾಮದವಳು


ಹೊಸಗದ್ದೆ ಪ್ರಭಾ ಮೂಲತಃ ಆಗುಂಬೆ ಸನಿಹದ ಹೊಸಗದ್ದೆಯ ಗ್ರಾಮದವಳಾಗಿದ್ದು, ನಕ್ಸಲ್ ಸಂಘಟನೆಯಲ್ಲಿ ಮಂಚೂಣಿಯಲ್ಲಿದ್ದಳು. ಮಲೆನಾಡಿನಲ್ಲಿ ನಕ್ಸಲ್ ಸಂಘಟನೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸಂಘಟನೆಯನ್ನು ಮುನ್ನೆಡುಸುತ್ತಿದ್ದಳು. ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಗೆ ಹಿನ್ನಡೆಯಾದ ಬೆನ್ನಲ್ಲೆ ಹಲವು ಮಂದಿ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾದರು. ಮತ್ತೆ ಕೆಲವರು ಸೈದ್ಧಾಂತಿಕ ಬಿನ್ನಾಭಿಪ್ರಾಯದಿಂದ ಸಂಘಟನೆ ತೊರೆದರು, ಮತ್ತೆ ಕೆಲವರು ಪೊಲೀಸರಿಗೆ ಶರಣಾಗತಿಯಾದರು. ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಗೆ ಹಿನ್ನಡೆಯಾಗುತ್ತಿದ್ದಂತೆ ತಮ್ಮ ಕ್ಷೇತ್ರವ್ಯಾಪ್ತಿಯನ್ನು ಕರ್ನಾಟಕ ತಮಿಳುನಾಡು ಕೇರಳ ಗಡಿಭಾಗದಲ್ಲಿ ವಿಸ್ತರಿಸಿದ್ದರು.
2010ರಲ್ಲಿ ಪ್ರಭಾ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು.
೨೦೧೦ ರಲ್ಲಿ ನಕ್ಸಲ್ ಪ್ರಭಾ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಗ್ರಾಮದ ಮುಖಂಡರೊಬ್ಬರಿಗೆ ಪ್ರಭಾ ಸಾವನ್ನಪ್ಪಿದ್ದಾಳೆ ಆಕೆಗೆ ಶೃದ್ದಾಂಜಲಿ ಅರ್ಪಿಸಿ ಎಂದು ದೂರವಾಣಿ ಕರೆ ಮಾಡಿದ್ದರು. ಹೀಗಾಗಿ ಅಂದು ಗ್ರಾಮಸ್ಥರೆಲ್ಲಾ ಪ್ರಭಾ ಮನೆ ಮುಂದೆ ಜಮಾಯಿಸಿದ್ದರು. ಪೊಲೀಸರು ಕೂಡ ಪ್ರಭಾ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಆಕೆಯ ಶವ ಸಿಗದೆ ಡೆತ್ ಡಿಕ್ಲೇರ್ ಮಾಡಲು ಸಾಧ್ಯವಿಲ್ಲ ಎಂದು ಅಂದಿನ ಎಸ್ಪಿ ಮುರುಗನ್ ಹೇಳಿದ್ದರು.
ಆದರೆ ನಕ್ಸಲ್ ಪ್ರಭಾ ಕೇರಳದಲ್ಲಿ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯಳಾಗಿರುವ ಬಗ್ಗೆ ಇತ್ತಿಚ್ಚಿನ ವರ್ಷಗಳಲ್ಲಿ ಪೊಲೀಸರಿಗೆ ಮಾಹಿತಿ ದಟ್ಟವಾಗಿ ಸಿಕ್ಕಿತ್ತು. ಪತಿ ಬಿ.ಜಿ ಕೃಷ್ಣಮೂರ್ತಿ ಪ್ರಭಾ ಸಾವಿತ್ರಿ ವಿಕ್ರಂ ಗೌಡ ಸೇರಿದಂತೆ ಮಲೆನಾಡಿನ ನಕ್ಸಲರೆಲ್ಲರೂ ಕೇರಳದಲ್ಲಿ ಆಶ್ರಯ ಪಡೆದಿದ್ದರು.
ಶರಣಾಗತಿಗೆ ಕರ್ನಾಟಕದಲ್ಲಿ ಹಿಂದೇಟು

ಕರ್ನಾಟಕ ರಾಜ್ಯದಲ್ಲಿ ನಕ್ಸಲರು ಶರಣಾಗತಿ ಪರ್ವ ಗೌರಿಲಂಕೇಶ್ ಇರುವಾಗ ಚುರುಕಾಗಿಯೇ ನಡೆದಿತ್ತು. ಊರಲ್ಲಿರಬೇಕಾದ ಹುಡುಗರು ಕಾಡಲ್ಲಿರುವ ಬಗ್ಗೆ ಕಳವಳ ಹೊಂದಿದ್ದ ಗೌರಿ ಲಂಕೇಶ್ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಆದರೆ ಅವರ ಹತ್ಯೆಯ ಬಳಿಕ ಶರಣಾಗತಿ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು. ಕರ್ನಾಟಕದಲ್ಲಿ ಹಿಂದೆ ಸಾಕಷ್ಟು ಎನ್‌ಕೌಂಟರ್‌ಗಳೂ ನಡೆದಿದ್ದವು. ಅದರಲ್ಲೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಕರ್ನಾಟಕ ಪೊಲೀಸರ ಮುಂದೆ ಶರಣಾಗಲು ನಕ್ಸಲರು ಹಿಂದೇಟು ಹಾಕಿದ್ದರು. ಈ ಕಾರಣದಿಂದಲೇ ಪ್ರಭಾ ತಮಿಳುನಾಡು ಪೊಲೀಸರ ಮುಂದೆ ಶರಣಾಗಿದ್ದಾಳೆ ಎನ್ನಲಾಗಿದೆ.
ಪ್ರಭಾ ತಲೆಗೆ ಐದು ಲಕ್ಷ ಬಹುಮಾನ
ಹೊಸಗದ್ದೆ ಪ್ರಭಾ ವಿರುದ್ಧ ರಾಜ್ಯದಲ್ಲಿ ನಲ್ವತ್ತಕ್ಕೂ ಅಧಿಕ ಕೇಸ್ ಗಳಿವೆ. ಶಿವಮೊಗ್ಗದಲ್ಲಿ ತಲ್ಲೂರು ಅಂಗಡಿ ಬಸ್ ಸುಟ್ಟ ಪ್ರಕರಣ, ಸೇರಿದಂತೆ ಶಿವಮೊಗ್ಗದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದೆ. ಆಕೆಯನ್ನು ಹುಡುಕಿಕೊಟ್ಟವರಿಗೆ ಐದು ಲಕ್ಷ ಬಹುಮಾನ ಘೋಷಿಸಲಾಗಿತ್ತು. ಹೊಸಗದ್ದೆ ಪ್ರಭಾಗೆ ಸ್ಟ್ರೋಕ್ ಆಗಿದ್ದು, ತೀವೃ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ತಮಿಳುನಾಡಿನ ತಿರಪತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಭಾ ಶರಣಾಗಿದ್ದಾಳೆ. ಒಟ್ಟಿನಲ್ಲಿ ನಕ್ಸಲರ ಸರಣಿ ಬಂಧನ, ಶರಣಾಗತಿ, ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆ ಹಿನ್ನಡೆಯಾಗುತ್ತಿರುವುದಕ್ಕೆ ಕಾರಣವಾಗಿದೆ.


