ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ ವರದಿಯಾಗಿರುವ ಈ ಎರಡು ಸಾವುಗಳು ನಮ್ಮ ವ್ಯವಸ್ಥೆಯೇ ಆತ್ಮವಲೋಕನ ಮಾಡಿಕೊಳ್ಳುವಂತವು. ಒಂದು ತೀರ್ಥಹಳ್ಳಿಯ ಅತಿಥಿ ಉಪನ್ಯಾಸಕ ಶ್ರೀಹರ್ಷ ಶ್ಯಾನುಬೋಗ್ ಅವರ ಆತ್ಮಹತ್ಯೆ. ಮತ್ತೊಂದು ಸೊರಬ ತಾಲೂಕು ಚಂದ್ರಗುತ್ತಿ ಸಮೀಪದ ಬೆನ್ನೂರು ಗ್ರಾಮದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಸುನೀಗಿದ ಲಕ್ಷ್ಮಣ ಅವರದು.
ಈ ಎರಡೂ ಸಾವುಗಳೂ ಬೇರೆ ಬೇರೆ ರೀತಿಯಾಗಿ ಕಂಡರೂ ಎರಡೂ ಸಾವಿನ ಕಾರಣ ಒಂದೆ. ಆಳುವ ಸರಕಾರಗಳು ಎಷ್ಟೇ ಜನಪರ ಅಂದರೂ, ಅವು ಜನರ ಪಾಲಿಗೆ ಗಾಳಿಗೋಪುರಗಳೇ ಎನ್ನುವುದನ್ನು ಈ ಎರಡೂ ಸಾವು ಸಾಬೀತು ಪಡಿಸಿವೆ.
ತೀರ್ಥಹಳ್ಳಿಪಟ್ಟಣದ ಬಾಳೇಬೈಲಿನಲ್ಲಿರುವ ಸರ್ಕಾರಿ ಡಿಗ್ರಿ ಕಾಲೇಜಿನ ಅತಿಥಿ ಉಪನ್ಯಾಸಕ ಗಣಕ ವಿಜ್ಞಾನ ವಿಭಾಗದ ಶ್ರೀಹರ್ಷ ಶಾನ್ ಬೋಗ್(೩೮)ಹೆಬ್ರಿಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಹರ್ಷ ಸುಮಾರು ೧೩ ವರ್ಷಕ್ಕೂ ಹೆಚ್ಚು ಕಾಲದಿಂದ ಈ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮತ್ತೆ ಕೊರೊನ ಭೀತಿ ಎದುರಾಗಿದೆ ಹೀಗಾದರೆ ಜೀವನ ನಿರ್ವಹಣೆಯ ಕಷ್ಟ ಸಾಧ್ಯ, ಅತಿಥಿ ಉಪನ್ಯಾಸರಿಗೆ ಸರ್ಕಾರದ ಸೇವಾ ಭದ್ರತೆ, ಆರ್ಥಿಕ ನೆರವು ಏನೂ ಇಲ್ಲ ಈ ಕಾರಣದಿಂದಲೇ ಅವರು ಸಾವಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರ ಸಹಪಾಠಿಗಳು ಅಭಿಪ್ರಾಯವಾಗಿದೆ. ಇತ್ತೀಚೆಗೆ ರಾಜ್ಯಾದ್ಯಂತ ಅತಿಥಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ ಆದರೆ ಸರ್ಕಾರ ಇವರ ಪ್ರತಿಭಟನೆಗೆ ಕಿವಿಗೊಡುತ್ತಿಲ್ಲ ದಶಕಗಳ ಅವರ ಹೋರಾಟಕ್ಕೆ ಬೆಲೆ ಇಲ್ಲವಾಗಿದೆ. ಎಲ್ಲ ಅರ್ಹತೆ ಇದ್ದರೂ ಜೀವನಕ್ಕಾಗುವಷ್ಟ ವೇತನ, ಕೆಲಸ ಇಲ್ಲದ ಕಾರಣಕ್ಕೆ ಬದುಕಿ ಬಾಳಬೇಕಾದ ಜೀವ ಬಲಿಯಾಗಿದೆ.
ಕೂಲಿಗಾಗಿ ಬಂದು ಶವವಾದ
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಮಾಸೂರಿನಿಂದ ಕೂಲಿ ಕೆಲಸಕ್ಕೆ ಬಂದಿದ್ದ ಲಕ್ಷ್ಮಣ(೫೦) ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಸುನೀಗಿದ್ದಾರೆ. ಕೊರೊನ ಕಾರಣದಿಂದ ಕಳೆದ ವರ್ಷ ಕೂಲಿಯೂ ಸಿಗದ ಪರಸ್ಥಿತಿಯಲ್ಲಿ ಲಕ್ಷ್ಮಣ ಅವರು ಕೂಲಿಗಾಗಿಯೇ ಮಲೆನಾಡಿಗೆ ಬಂದಿದ್ದರು. ಕಾರ್ಮಿಕರಿಗೆ ಇದ್ದ ಊರಲ್ಲಿ ಕೆಲಸ ಇದ್ದಿದ್ದರೆ, ಅವರು ವಲಸೆ ಬರುವ ಅಗತ್ಯವಿರಲಿಲ್ಲ. ಆದರೆ ತುತ್ತಿನ ಚೀಲ ತುಂಬಿಕೊಳ್ಳುವ ಸಲುವಾಗಿ ಪರಊರಿಗೆ ಬಂದು ಸಾವುಕಂಡಿರುವ ಕೂಲಿ ಕಾರ್ಮಿಕನ ಸಾವು ಕರಳು ಕಿವುಚುವಂತಿದೆ. ಹೀಗೆ ಹೊಟ್ಟೆಪಾಡಿನ ಕಾಯಕದ ನಡುವೆ ಆದ ಈ ಎರಡು ಸಾವುಗಳು ಮತ್ತೆಮತ್ತೆ ವ್ಯವಸ್ಥೆಯಲ್ಲಿನ ಲೋಪವನ್ನು ಎತ್ತಿ ತೋರಿಸುತ್ತಿವೆ.