ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಶಿವಮೊಗ್ಗ ನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 1560 ಮನೆಗಳ ನಿರ್ಮಾಣ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಡಳಿಯ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಒಟ್ಟು 363ಮನೆಗಳು ಈಗಾಗಲೇ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಅಂತಿಮ ಹಂತದಲ್ಲಿರುವ 414 ಮನೆಗಳನ್ನು ನಾಲ್ಕು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಇನ್ನೂ ಆರಂಭಿಸದಿರುವ 217ಮನೆಗಳ ನಿರ್ಮಾಣ ಕಾರ್ಯ ಮುಂದಿನ 8ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ನಿಗದಿತ ಅವಧಿಯ ಒಳಗಾಗಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸದಿದ್ದರೆ, ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಮಂಜೂರಾಗಿದ್ದ 1560ಮನೆಗಳ ಪೈಕಿ 971ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು,ಈಗಾಗಲೇ ಫಲಾನುಭವಿಗಳಿಂದ 6.58 ಕೋಟಿ ರೂ. ಸಂಗ್ರಹಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳು 1.60ಲಕ್ಷ ರೂ, ಪ.ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು 31ಸಾವಿರ ರೂ. ವಂತಿಗೆ ಪಾವತಿಸಬೇಕಾಗಿದೆ. 4.75ಲಕ್ಷ ರೂ. ಸರ್ಕಾರ ಸಬ್ಸಿಡಿ ಒದಗಿಸಲಾಗುತ್ತಿದೆ.
ಕೆಲವು ಫಲಾನುಭವಿಗಳು ಪ್ರಾರಂಭಿಕ ವಂತಿಗೆಯನ್ನು ನೀಡಲು ವಿಳಂಬ ಮಾಡುತ್ತಿದ್ದು, ಈ ಮೊತ್ತವನ್ನು ತಕ್ಷಣ ಪಾವತಿಸಲು ಸೂಚಿಸಲಾಗಿದೆ. ಮಂಡಳಿ ವತಿಯಿಂದ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತಿಲ್ಲ. ಬ್ಯಾಂಕ್‍ನಿಂದ ನೇರವಾಗಿ ಸಾಲ ಪಡೆಯಲು ನೆರವು ನೀಡಲಾಗುವುದು. ಈ ಕುರಿತು ಎಲ್ಲಾ ಬ್ಯಾಂಕ್‍ಗಳ ಸಭೆಯನ್ನು ಕರೆದು ಸೂಚನೆ ನೀಡಲು ಜಿಲ್ಲಾಧಿಕಾರಿ ಅವರಿಗೆ ತಿಳಿಸಲಾಗಿದೆ. ಫಲಾನುಭವಿಗಳೇ ನೇರವಾಗಿ ಮನೆ ನಿರ್ಮಿಸಲು ಮುಂದೆ ಬಂದರೆ ಅನುಮತಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.
ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡಲು ಪ್ರಕ್ರಿಯೆ ನಡೆಯುತ್ತಿದ್ದು, 1783 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಒಟ್ಟು 53 ಘೋಷಿತ ಕೊಳಚೆ ಪ್ರದೇಶಗಳಿದ್ದು, ಸದರಿ ಕೊಳಚೆ ಪ್ರದೇಶಗಳ ವಿಸ್ತೀರ್ಣ 139 ಎಕ್ರೆಯಿದೆ. ಖಾಸಗಿ ಮಾಲಿಕತ್ವದ ಕೊಳಚೆ ಪ್ರದೇಶಗಳನ್ನು ಘೋಷಿತ ಕೊಳಚೆ ಪ್ರದೇಶಗಳೆಂದು ಪರಿಗಣಿಸಲಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನರೇಗಾ ಮಾನವದಿನಗಳ ಗುರಿ ಹೆಚ್ಚಳ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2021-22ನೇ ಸಾಲಿಗೆ ರಾಜ್ಯಕ್ಕೆ ನೀಡಲಾಗಿದ್ದ 13 ಕೋಟಿ ಮಾನವ ದಿನಗಳ ಗುರಿಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಬೇಡಿಕೆಯನ್ನು ಮನ್ನಿಸಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಈ ಸಾಲಿಗೆ 1.40ಕೋಟಿ ಮಾನವ ದಿನಗಳನ್ನು ಒದಗಿಸಿದೆ. ಇದರಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 715ಕೋಟಿ ರೂ. ಅನುದಾನ ಲಭ್ಯವಾಗಲಿದೆ.
ಕೇಂದ್ರ ಸರ್ಕಾರ ಯೋಜನೆಯಡಿ 661.24ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಇಲ್ಲಿಯವರೆಗೆ ಸಂಪೂರ್ಣವಾಗಿ ಯೋಜನೆಯಡಿ ಕೂಲಿ ಹಣವನ್ನು ಪಾವತಿಸಿದಂತಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪವಿಭಾಗಧಿಕಾರಿ ಪ್ರಕಾಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.