ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ
ಸೊರಬ ತಾಲೂಕು ಭಾರತೀಯ ಕಿಸಾನ್ ಸಂಘ ಧರಣಿ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮಂಗಳವಾರ ಮನವಿ ಸಲ್ಲಿಸಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕಿನ ಕಿಸಾನ್ ಸಂಘದ ಅಧ್ಯಕ್ಷ ಅಶೋಕ್ ಪಾಟೀಲ್ ಸಾಲಿಗೆ ಮಾತನಾಡಿ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶದಾದ್ಯಂತ ಭಾರತೀಯ ಕಿಸಾನ್ ಸಂಘ ಜಿಲ್ಲಾಧಿಕಾರಿಗಳ ಮೂಲಕ ರೈತನ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ ಖರೀದಿ ಗ್ಯಾರಂಟಿಯನ್ನು ನೀಡಿ ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಮಾಡಬಾರದೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿತ್ತು. ಆದರೆ ಇದುವರೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ರಾಷ್ಟ್ರಪತಿಯವರು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ದೇಶ ಸ್ವಾತಂತ್ರ ಕಂಡು ಎಪ್ಪತ್ತೈದು ವರ್ಷಗಳು ಕಳೆದಿವೆ. ರೈಲ್ವೆ, ರಸ್ತೆ, ವಿದ್ಯುನ್ಮಾನ ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದೆ. ಆದರೆ ಜೀವನಕ್ಕೆ ಅವಶ್ಯಕವಾಗಿ ಬೇಕಾಗುವ ಆಹಾರ ಉತ್ಪಾದಿಸುವ ಕೃಷಿ ಕೇತ್ರವು ಇಂದು ದುಸ್ಥಿತಿಯತ್ತ ಸಾಗುತ್ತಿದೆ. ೧೯೯೦ ದಶಕದಿಂದ ದೇಶದಲ್ಲಿ ೩.೫ ಲಕ್ಷಕ್ಕು ಅಧಿಕ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಪ್ರತಿ ವರ್ಷ ಕೃಷಿ ತೆಜಿಸಿ ನಗರದತ್ತ ಸಾಗುತ್ತಿರುವವರ ಸಂಖ್ಯ ಗಣನೀಯವಾಗಿ ಏರುತ್ತಿದೆ. ರೈತರು ತಾವು ಬೆಳೆದ ಬೆಳೆಗಳ ಒಳ ಸುರಿಗಳ ಬೆಲೆ ಅಧಿಕವಾಗಿ ಪ್ರಕೃತಿ ವಿಕೋಪದಿಂದ ನಷ್ಟ ಉಂಟಾಗಿ ಲಾಭದಾಯಕ ಬೆಲೆ ಸಿಗದ ಕಾರಣ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಬೇರೆ ಕ್ಷೇತ್ರಗಳ ಉತ್ಪಾದಕರು ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ತಾವೇ ದರ ನಿಗದಿಪಡಿಸುತ್ತಾರೆ. ಆದರೆ ರೈತನಿಗೆ ಮಾತ್ರ ಸಾಧ್ಯವಾಗುತ್ತಿಲ್ಲ. ಮಧ್ಯವರ್ತಿಗಳು ದರ ನಿಗದಿಮಾಡುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಕೃಷಿ ಕ್ಷೇತ್ರ ಅವನತಿಗೊಂಡು ಆಹಾರದ ಅಭಾವ ಉಂಟಾಗುತ್ತದೆ. ಕೇಂದ್ರ ಸರ್ಕಾರ ಕೃಷಿ ಕ್ಷೇತ್ರ ಸುಗಮವಾಗಬೇಕೆಂದರೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ದೊರೆಯುವಂತಾಗಬೇಕು ಸರ್ಕಾರ ಕೇವಲ ಬೆಂಬಲ ಬೆಲೆ ಘೋಷಿಸಿದರೆ ಸಾಲದು, ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಖರೀಸಿದರೆ ಶಿಕ್ಷಾರ್ಹವಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಿ.ಚೆನ್ನಪ್ಪ, ತಾಲೂಕು ಕಾರ್ಯದರ್ಶಿ ಶಿವಾನಂದಪ್ಪ ಬಿ.ಕುಣೇತೆಪ್ಪ, ಎಪಿಎಂಸಿ ಅಧ್ಯಕ್ಷ ದಯಾನಂದಗೌಡ, ಗಣಪತಿ ಬಂಕಸಾಣ, ಕಲೀಮುಲ್ಲಾ ಜಡೆ ಕೋಟೆ, ಗಂಗಾಧರ ತೊರವಂದ, ಶೇಖರಪ್ಪ, ಶಂಕರಪ್ಪ ಕಾತುವಳ್ಳಿ ಇತರರು ಪಾಲ್ಗೊಂಡಿದ್ದರು.