ಕೌಟಂಬಿಕ ಕಲಹದಿಂದ ನೊಂದ ವಿವಾಹಿತ ಮಹಿಳೆಯೊಬ್ಬಳು ತನ್ನ ನಾಲ್ಕು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿದರಹಳ್ಳಿ ಗ್ರಾಮದ ವಿದ್ಯಾ(೩೨) ಎಂಬ ಮಹಿಳೆ ತನ್ನ ೪ ವರ್ಷದ ತನ್ವಿ ಜೊತೆ ಮನೆಯ ಹಿಂಬದಿ ಇರುವ ೫೦ ಅಡಿ ಅಳದ ಬಾವಿಗೆ ಹಾರಿ ಗುರುವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ವಿದ್ಯಾ ಬಾವಿಗೆ ಬೀಳುತ್ತಿದ್ದಂತೆಯೇ ಮನೆಯವರು ಹೊಸನಗರ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ನೋಡುವಷ್ಟರಲ್ಲಿ ತಾಯಿ-ಮಗಳು ಇಬ್ಬರೂ ಮೃತಪಟ್ಟಿದ್ದರು.
ಅಗ್ನಿಶಾಮಕ ದಳದ ಸಿಬ್ಬಂದಿ ಭೀಷ್ಮಾಚಾರಿ ೫೦ ಅಡಿ ಅಳದಿಂದ ತಾಯಿ – ಮಗಳ ಶವ ಮೇಲಕ್ಕೆ ಎತ್ತಿದ್ದಾರೆ. ಈ ತಂಡದಲ್ಲಿ ಠಾಣಾಧಿಕಾರಿ ರಾಜಪ್ಪ ಕೆ.ಟಿ ಹಾಗೂ ಸಿಬ್ಬಂದಿ ಸುರೇಶ್, ರಾಜೇಶ್ ಇದ್ದರು. ಹೊಸನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.