ಹೊಸನಗರ ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿರುವ ಹೊಸನಗರ ತಾಲೂಕನ್ನು ವಿಧಾನಸಭಾ ಕ್ಷೇತ್ರವಾಗಿ ಮರುಸ್ಥಾಪನೆ ಮಾಡಬೇಕು ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಆಗ್ರಹಿಸಿದ್ದಾರೆ.ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿಶನಿವಾರ ಹೊಸನಗರ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಹೊಸನಗರ ತಾಲೂಕು ಕ್ಷೇತ್ರ ಕಳೆದುಕೊಂಡ ಬಳಿಕ ಅತಂತ್ರವಾಗಿದೆ. ತಾಲೂಕು ವ್ಯಾಪ್ತಿಯ ಜನರು 6 ಜಲಾಶಯ ನಿರ್ಮಾಣದಿಂದ ಮನೆ, ಭೂಮಿ ಕಳೆದುಕೊಂಡು ಸಾಕಷ್ಟು ಸಮಸ್ಯೆ ಅನುಭವಿಸಿದ್ದಾರೆ. ಈಗ ತಾಲೂಕನ್ನು ತೀರ್ಥಹಳ್ಳಿ ಹಾಗೂ ಸಾಗರ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಇದರಿಂದ ಅಭಿವೃದ್ಧಿ ವಿಷಯದಲ್ಲಿಹಿಂದುಳಿದಿದೆ. ಕೇವಲ ಜನಸಂಖ್ಯಾಧಾರಿತ ಮಾನದಂಡದಂತೆ ಕ್ಷೇತ್ರ ರಚನೆ ಮಾಡುವುದು ಅವೈಜ್ಞಾನಿಕವಾಗುತ್ತದೆ. ದೇಶದ ಈಶಾನ್ಯ ರಾಜ್ಯಗಳಲ್ಲಿಭೌಗೋಳಿಕ ಹಿನ್ನೆಲೆಯನ್ನು ಗಮನದಲ್ಲಿಇಟ್ಟುಕೊಂಡು ಕ್ಷೇತ್ರ ರಚಿಸಿರುವ ಮಾದರಿಯನ್ನು ಇಲ್ಲಿಯೂ ಅನುಸರಿಸಬೇಕು. ತಾಲೂಕಿನ ಮತದಾರರನ್ನು ಒಗ್ಗೂಡಿಸಿ, ಮತ್ತೊಮ್ಮೆ ಕ್ಷೇತ್ರ ರಚನೆ ಆಗುವವರೆಗೂ ಹೋರಾಟ ನಡೆಸುವುದು ಅನಿವಾರ‍್ಯವಾಗಿದೆ ಎಂದು ಅವರು ಹೇಳಿದರು.ಗ್ರೇಡ್ 2 ತಹಸೀಲ್ದಾರ್ ರಾಕೇಶ್ ಮನವಿ ಸ್ವೀಕರಿಸಿದರು. ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ, ಅಂಬೇಡ್ಕರ್ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ್, ತಾ.ಪಂ. ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ವಿಶ್ವ ಹಿಂದು ಪರಿಷತ್ ಸಂಘಟಕ ಸುಧೀಂದ್ರ ಪಂಡಿತ್, ಪ್ರಮುಖರಾದ ಎ.ವಿ.ಮಲ್ಲಿಕಾರ್ಜುನ, ಶ್ರೀಧರ ಉಡುಪ, ಉಸ್ಮಾನ್ ಸಾಬ್, ಶಾಬುದ್ದೀನ್ ಮತ್ತಿತರರು ಇದ್ದರು.
previous post