Malenadu Mitra
ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸ್ಥಳಪರಿಶೀಲನೆ, ಕೇಂದ್ರ ಸರಕಾರದಿಂದ 20 ಕೋಟಿ ಅನುದಾನನ ಬಿಡುಗಡೆ ಭರವಸೆ: ಸಂಸದ ಬಿ.ವೈ.ರಾಘವೇಂದ್ರ

ಸಮುದಾಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರದ ನೆರವಿನೊಂದಿಗೆ ನಗರಕ್ಕೆ ಹತ್ತಿರದಲ್ಲಿ ಸ್ಥಳವನ್ನು ಗುರುತಿಸಿ, ದ್ವಿತೀಯ ಹಂತದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮ ಮತ್ತು ಮಾನವ ಅಭಿವೃದ್ಧಿಗಾಗಿ ಕೈಗೊಳ್ಳುವ ಎಲ್ಲಾ ಚಟುವಟಿಕೆಗಳಲ್ಲಿ ವಿಜ್ಞಾನವನ್ನು ಅನ್ವಯಗೊಳಿಸಲು, ವೈಜ್ಞಾನಿಕ iನೋಭಾವವನ್ನು ಬೆಳೆಸುವ ಹಿನ್ನೆಲೆಯಲ್ಲಿ ಹಾಗೂ ಜನಸಾಮಾನ್ಯರಲ್ಲಿ ಅದರ ಅರಿವನ್ನು ಉಳಿಸಿ ಬೆಳೆಸಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಸಹಕಾರಿಯಾಗಲಿದೆ ಎಂದರು.
ಸದರಿ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಪ್ರದರ್ಶನಗಳು, ವಿಚಾರಸಂಕಿರಣಗಳು, ಉಪನ್ಯಾಸಗಳು, ವಿಜ್ಞಾನ ಶಿಬಿರಗಳು ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಜನರಲ್ಲಿ ವಿಜ್ಞಾನ ವಿಷಯಗಳಲ್ಲಿ ಅಭಿರುಚಿ ಉಂಟು ಮಾಡಲಾಗುವುದು ಎಂದರು.
ಶಾಲಾ-ಕಾಲೇಜುಗಳಲ್ಲಿ ನೀಡುವ ವಿಜ್ಞಾನ ಶಿಕ್ಷಣಕ್ಕೆ ಪೂರಕವಾಗಿ ವೈಜ್ಞಾನಿಕ ಮತ್ತು ಸೃಜನಶೀಲ ಚಿಂತನೆಯನ್ನು ಬೆಳೆಸಲು ಶಾಲೆಯಿಂದ ಹೊರಗೆ ಹಲವು ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುವಲ್ಲಿ ಈ ಕೇಂದ್ರ ಸಕ್ರಿಯವಾಗಿರಲಿದೆ. ಅಲ್ಲದೇ ವಿಜ್ಞಾನ ಶಿಕ್ಷಣ ಮತ್ತು ಅದರ ಜನಪ್ರಿಯತೆಗಾಗಿ ವಿಜ್ಞಾನ ಸಂಗ್ರಹಾಲಯ, ಪ್ರದರ್ಶನ ಉಪಕರಣಗಳು ಮತ್ತು ವೈಜ್ಞಾನಿಕ ಬೋಧನಾ ಸಾಧನಗಳನ್ನು ಅಭಿವೃದ್ಧಿಪಡಿಸಲು ಮತ್ತು ತಯಾರಿಸುವಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದರು.
ವಿಶೇಷವಾಗಿ ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು, ಯುವ ಉದ್ಯಮಿಗಳು, ತಂತ್ರಜ್ಞರು, ದೈಹಿಕ ವಿಕಲಚೇತನರು, ಗೃಹಣಿಯರು ಮತ್ತು ಆಸಕ್ತರಿಗಾಗಿ ಕೆಲವು ನಿರ್ಧಿಷ್ಟ ವಿಷಯಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದ ಅವರು ಈ ಕೇಂದ್ರದ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಮೂಲಕ ೧೫-೨೦ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಿದೆ ಎಂದರು.
ಮಂಗಳೂರು, ಧಾರವಾಡ, ಬೆಂಗಳೂರು ನಂತರ ಶಿವಮೊಗ್ಗ ರಾಜ್ಯದ ನಾಲ್ಕನೇ ವಿಜ್ಞಾನ ಕೇಂದ್ರವಾಗಿರಲಿದ್ದು, ಶಿವಮೊಗ್ಗ ಮತ್ತು ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ನಾಗರಿಕರಿಗೆ ವಿಜ್ಞಾನದ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಸ್ಥಳ ಪರಿಶೀಲನಾಗಿ ಆಗಮಿಸಿದ್ದ ತಜ್ಞರ ತಂಡದವರು ನವುಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿ.ಎಸ್.ಐ. ಆಸ್ಪತ್ರೆಗೆ ಹೊಂದಿಕೊಂಡಂತೆ ಗುರುತಿಸಲಾಗಿದ್ದ ನಿವೇಶನ ಮತ್ತು ಸಹ್ಯಾದ್ರಿ ಕಾಲೇಜಿನ ಆವರಣದ ಪ್ರದೇಶಗಳನ್ನು ವೀಕ್ಷಿಸಿ, ಭೂಮಿಗೆ ಸಂಬಂಧಿಸಿದಂತ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಂಡದಲ್ಲಿ ತಜ್ಞರಾದ ಎಸ್.ಕುಮಾರ್, ಕೊಲ್ಕತ್ತಾ, ಶ್ರೀಮತಿ ಕೆ.ಎ.ಸಾಧನ ಬೆಂಗಳೂರು, ಎಸ್.ಸಿಕಾದಾರ್ ಕೊಲ್ಕತ್ತಾ, ಡಾ|| ಎಮ್.ಎಸ್.ರವಿಕುಮಾರ್ ಮತ್ತು ವಿಶ್ವಕೀರ್ತಿ, ಇವರೊಂದಿಗೆ ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಕೈಗಾರಿಕಾ ಅಭಿವೃದ್ಧಿ ನಿಗಮದ ರಾಜ್ಯ ಉಪಾಧ್ಯಕ್ಷ ದತ್ತಾತ್ರಿ, ಸೂಡಾ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ಜಗದೀಶ್, ಕುವೆಂಪು ವಿವಿ ರಿಜಿಸ್ಟ್ರಾರ್ ಶ್ರೀಮತಿ ಜಿ.ಅನುರಾಧ, ಅಪರ ಜಿಲ್ಲಾಧಿಕಾರಿ ಡಾ||ನಾಗೇಂದ್ರ ಎಫ್.ಹೊನ್ನಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ರಮೇಶ್ ಮತ್ತಿತರರಿದ್ದರು.

ಮತೀಯ ಶಕ್ತಿಗಳಿಂದ ವಿದ್ಯಾರ್ಥಿಗಳ ದುರ್ಬಳಕೆ

ಕೆಲವು ಮತೀಯ ಶಕ್ತಿಗಳಿಂದ ಮುಗ್ದ ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸಕ್ಕೆ ಕೈಹಾಕಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.
ಎಸ್.ಡಿ.ಪಿ.ಐ., ಪಿಎಫ್‌ಐ ಸಂಸ್ಥೆಗಳು ಹಿಜಾಬ್ ವಿಷಯಗಳನ್ನು ಮುಂದಿಟ್ಟುಕೊಂಡು ಮುಗ್ದ ವಿದ್ಯಾರ್ಥಿಗಳ ಮನಸ್ಸನ್ನು ಹಾಳು ಮಾಡುತ್ತಿದೆ. ಜೊತೆಗೆ ಶಾಂತಿ ಭಂಗ ಉಂಟು ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಕರ್ನಾಟಕ ರಾಜ್ಯ ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಆದರೆ ಕೆಲವರು ಹಿಜಾಬ್ ವಿಷಯ ಇಟ್ಟುಕೊಂಡು ಶಾಂತಿ ಹದಗೆಡಿಸಿ ರಾಜ್ಯಕ್ಕೆ ಕಪ್ಪುಚುಕ್ಕೆ ಇಡುವ ಕೆಲಸ ಮಾಡುತ್ತಿದ್ದಾರೆ.
ಸದನಸಲ್ಲಿ ಈಗಾಗಲೇ ಚರ್ಚೆ ಕೂಡ ನಡೆಯುತ್ತಿದೆ. ಕಾಂಗ್ರೆಸ್‌ನ ಮುಖಂಡರು ಸದನದ ಒಳಗೂ ಶಾಂತಿ ಭಂಗ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಆಕ್ರೋಶದಿಂದ ಮಾತನಾಡುತ್ತಾ ಸದನದ ಸಮಯವನ್ನು ಬೇರೆ ದಿಕ್ಕಿನತ್ತ ಕೊಂಡೊಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Ad Widget

Related posts

ಬಗರ್ ಹುಕುಂ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಂಸದ ರಾಘವೇಂದ್ರ ಆರೋಪ

Malenadu Mirror Desk

ದಂಡಿ,ದಾಳಿಗೆ ಹೆದರದ ರೇಣುಕಾಚಾರ್ಯ ಮಂಗಕ್ಕೆ ಹೆದರಿದ್ಯಾಕೆ ?

Malenadu Mirror Desk

ಈ ಬಾರಿ ಸಿಗಂದೂರು ಜಾತ್ರೆ ಇಲ್ಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.