ಬಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣಕ್ಕೆ ಹೊರರಾಜ್ಯದ ಕಾರನನ್ನು ಬಳಸಿಕೊಳ್ಳಲಾಗಿದೆ ಮತ್ತು ಮೃತನಿಗೆ ವಿಡಿಯೊ ಕಾಲ್ ಮಾಡಿದ್ದ ಹುಡುಗಿಯರು ಯಾರು ಎಂದು ಗೊತ್ತಾಗಿದೆ.
ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್ ಅವರು ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಸಂದರ್ಭ ಈ ಮಾಹಿತಿ ನೀಡಿದರು. ಎಲ್ಲಾ ಪ್ರಮುಖ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಮತ್ತೆ ಪೋಲಿಸ್ ಕಷ್ಟಡಿಗೆ ಕೋರಲಾಗುವುದು. ಆ ಬಳಿಕ ಮತ್ತೆ ವಿಚಾರಣೆ ಮಾಡಿದಾಗ ಹೆಚ್ಚಿನ ಮಾಹಿತಿ ಲಭವಾಗಲಿದೆ ಎಂದು ಹೇಳಿದರು.
ಆರೋಪಿಗಳು ಕೊಲೆ ಮಾಡಲು ಒಂದು ಕಾರು ಮತ್ತು ತಪ್ಪಿಸಿಕೊಳ್ಳಲು ಮತ್ತೊಂದು ಕಾರು ಬಳಸಿಕೊಂಡಿದ್ದು, ಎರಡೂ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆ ಮಾಡಲು ಬೇರೆ ರಾಜ್ಯದ ಕಾರನ್ನು ಬಳಸಿಕೊಂಡಿದ್ದಾರೆ. ಆ ಕಾರು ಯಾರದ್ದು, ಶಿವಮೊಗ್ಗಕ್ಕೆ ಯಾಕೆ ಬಂತು, ಕಾರಿನ ಮಾಲೀಕರು ಯಾರು ಎಂಬ ಬಗ್ಗೆ ತನಿಖೆ ನಡೆಸುತಿದ್ದೇವೆ ಎಂದರು. ಬಂಧಿತನೊಬ್ಬ ಹಳೆ ಕಾರುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ಕಾರಣ ಚತ್ತೀಸ್‌ಘಡ ನೋಂದಣಿಯ ಕಾರನ್ನು ಯಾರೊ ಮಾರಾಟ ಮಾಡಲು ಕೊಟ್ಟಿರಲೂಬಹುದು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ.
ಹನ್ನೊಂದು ದಿನ ಪೊಲೀಸ್ ಕಸ್ಟಡಿಗೆ
ಎಲ್ಲಾ ಹತ್ತು ಆರೋಪಿಗಳನ್ನು ನ್ಯಾಯಾಲಯ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸರು ಆರೋಪಿಗಳ ವಿಚಾರಣೆ ಬಾಕಿಯಿದ್ದು, ಕಸ್ಟಡಿಗೆ ನೀಡುವಂತೆ ಸಲ್ಲಿಸಿದ ಅರ್ಜಿ ಮಾನ್ಯ ಮಾಡಿದ ನ್ಯಾಯಾಲಯ ಆರೋಪಿಗಳನ್ನು ಹನ್ನೊಂದು ದಿನಗಳ ಕಸ್ಟಡಿಗೆ ನೀಡಿದೆ.
ವಿಡಿಯೊ ಕಾಲ್ ಮಾಡಿದವರ ಪತ್ತೆ
ಹರ್ಷನ ಮೊಬೈಲ್ ಇದುವರೆಗೆ ಪತ್ತೆಯಾಗಿಲ್ಲ. ಆದರೆ ಆತನಿಗೆ ವೀಡಿಯೋ ಕರೆ ಮಾಡಿದ ಹುಡುಗಿಯರನ್ನು ಪತ್ತೆ ಮಾಡಿದ್ದೇವೆ. ಈ ಕೊಲೆಗೂ ಆ ವಿಡಿಯೊ ಕಾಲ್‌ಗೂ ಸಂಬಂಧವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಪರಿಚಯಸ್ಥಳಾಗಿದ್ದ ಅದೇ ಏರಿಯಾದ ಹುಡುಗಿಯೊಬ್ಬಳು ವಿಡಿಯೋ ಕಾಲ್ ಮಾಡಿದ್ದಳೆಂಬುದು ಗೊತ್ತಾಗಿದೆ. ಪೊಲೀಸರಿಗೆ ಲಾಂಗ್- ಮಚ್ಚು ತೋರಿಸಿ ಬೆದರಿಕೆ ಹಾಕಿದವರು ಯಾರು ಎಂಬದೂ ಗೊತ್ತಾಗಿದೆ. ಅವರನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಎಸ್ ಪಿ ಮಾಹಿತಿ ನೀಡಿದರು.
ಹರ್ಷ ಕೊಲೆ ಪ್ರಕರಣದಲ್ಲಿ ಸಾತು ಗ್ಯಾಂಗ್ ಭಾಗಿಯಾಗಿತ್ತೆ, ಕೊಲೆ ಹಿಂದೆ ಯಾವುದಾದರೂ ಸಂಘಟನೆಗಳಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತಿದ್ದೇವೆ. ಖಾಸಿಫ್, ಆಸಿಫ್ ಮೇಲೆ ಐದು, ರಿಹಾನ್ ಮೇಲೆ ಮೂರು ಹಾಗೂ ಅಪ್ನಾನ್ ಮೇಲೆ ಎರಡು ಕಾನೂನು ಸುವ್ಯವಸ್ಥೆ ಪ್ರಕರಣಗಳಿವೆ. ಉಳಿದಂತೆ ಇವರ ಮೇಲೆ ಹಲವು ಡಕಾಯಿತಿ, ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.