ಸೊರಬ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಡಿಕೆ ತೋಟ ಬೆಂಕಿಗೆ ನಾಶವಾಗಿರುವ ಘಟನೆ ತಾಲೂಕಿನ ಕೊಡಕಣಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ರೊಟ್ಟಿಕೆರೆ ಸಮೀಪದಲ್ಲಿರುವ ಶೇಷಪ್ಪ ವಡ್ಡಿ ಕೊಡಕಣಿ ಅವರ ತೋಟದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಆಗಿ ಸುಮಾರು ಒಂದೂವರೆ ಎಕರೆ ತೋಟದಲ್ಲಿರುವ ಅಡಿಕೆ ಮರಗಳು ಬಹುಪಾಲು ನಾಶವಾಗಿವೆ. ತೋಟಕ್ಕೆ ಅಳವಡಿಸಿದ ಪೈಪ್‌ಲೈನ್ ಕೂಡ ಬೆಂಕಿಗೆ ಬೆಂದು ನಾಶವಾಗಿದ್ದು, ಕುಟುಂಬದವರ ರೋಧನೆ ಮುಗಿಲು ಮುಟ್ಟುವಂತಿತ್ತು. ಸರಕಾರ ಸೂಕ್ತ ಪರಿಹಾರ ನೀಡಬೇಕಿದೆ.
ತೋಟಕ್ಕೆ ಬೆಂಕಿ ಬಿದ್ದಿರುವುದು ಜಮೀನಿನವರಿಗೆ ತಿಳಿದಿರಲಿಲ್ಲ. ಪಕ್ಕದ ಜಮೀನಿನ ವೈ.ಡಿ.ಈಶ್ವರಪ್ಪ ಅವರು ಬೆಂಕಿ ಬಿದ್ದಿರುವುದನ್ನು ಗಮನಿಸಿ ಆರಿಸಲು ಪ್ರಯತ್ನಿಸಿದ್ದರು. ಸೊರಬ ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ ವಾಹನದಲ್ಲಿ ಹೋಗುತ್ತಿದ್ದ ಅಂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಎಸ್.ಹೇಮಚಂದ್ರ, ಪದವಿ ಕಾಲೇಜಿನ ಉಪನ್ಯಾಸಕ ಎಸ್.ಎಂ.ನೀಲೇಶ್, ರಮೇಶ್ ಶಾಂತಗೇರಿ ಹಾಗೆಯೇ ಕೊಡಕಣಿ ಗ್ರಾಮದ ವಕೀಲ ಶರತ್, ಹೂವಪ್ಪ ನಾಯ್ಕ್ ಯಂಕೇನ್, ಸುನೀಲ್ ಸೇರಿ ಬೆಂಕಿ ಆರಿಸಿ ಕಾಲು ಎಕರೆ ತೋಟ ಉಳಿಸುವಲ್ಲಿ ಹಾಗೂ ಪಕ್ಕದ ತೋಟಕ್ಕೂ ಬೆಂಕಿಯ ತಗುಲುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾದರು. ನಂತರ ಅಗ್ನಿಶಾಮಕ ದಳ ವಾಹನ ಆಗಮಿಸಿತು.