Malenadu Mitra
ರಾಜ್ಯ ಶಿವಮೊಗ್ಗ

ಸ್ಥಳೀಯ ಸಮಸ್ಯೆಗಳ ಇತ್ಯರ್ಥಕ್ಕೆ ನಿರಂತರ ಹೋರಾಟ, ಜನ್ಮದಿನ ಆಚರಿಸಿಕೊಂಡ ಮಾಜಿ ಶಾಸಕ ಮಧುಬಂಗಾರಪ್ಪ ಸಂಕಲ್ಪ

ಡಬ್ಬಲ್ ಎಂಜಿನ್ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ರಾಜ್ಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಹೋರಾಟಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸರಕಾರ ದಿವ್ಯ ನಿರ್ಲಕ್ಷ್ಯ ತಾಳಿದ್ದು, ನಿರಂತರ ಹೋರಾಟದ ಮೂಲಕ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.
ಅವರು ಬುಧವಾರ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಸಂಘಟನೆ ಮತ್ತು ಹೋರಾಟದ ಮೂಲಕವೇ ಬಲಗೊಳಿಸಲಾಗುವುದು. ಪಕ್ಷದ ಎಲ್ಲಾ ಹಿರಿಯರ ಆಶಯವೂ ಇದೇ ಆಗಿದೆ. ಅಭಿವೃದ್ಧಿಯತ್ತ ಸಾಗುವುದೇ ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಸೇರಿ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಸೊರಬ ಹಾಗೂ ಜಿಲ್ಲೆ ಮತ್ತು ರಾಜ್ಯದಲ್ಲಿ ಬಗರ್ ಹುಕುಂ ಸಮಸ್ಯೆ ತೀವ್ರವಾಗಿದೆ. ಯಾವುದೇ ಕಾರಣಕ್ಕೂ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅವರ ಪರವಾಗಿ ಶಾಸಕನಾಗಿದ್ದಾಗಲೂ ಹೋರಾಟ ಮಾಡಿದ್ದೇನೆ. ಈಗಲೂ ಮಾಡುವೆ. ಹಂತ ಹಂತವಾಗಿ ಸೊರಬದಿಂದಲೇ ಈ ಹೋರಾಟ ಆರಂಭವಾಗಿ ಇಡೀ ರಾಜ್ಯಾದ್ಯಂತ ವಿಸ್ತಾರಗೊಳ್ಳುತ್ತದೆ ಎಂದರು. ಅರಣ್ಯ ಮತ್ತು ಕಂದಾಯ ಇಲಾಖೆಯ ಸಾಗುವಳಿದಾರರು ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಇವರಿಗೆ ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಸೊರಬ ಒಂದರಲ್ಲಿಯೇ ಸುಮಾರು ೭೨೦೦ ಅರ್ಜಿಗಳಿವೆ. ಹಲವು ಸಾವಿರ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಈಗಿನ ಬಿಜೆಪಿ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ತಂದು ಸಾಗುವಳಿದಾರರ ಹಿತ ಕಾಪಾಡಬಹುದಿತ್ತು. ಆದರೆ, ಹಾಗೇ ಮಾಡದೇ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿದೆ. ಇದರಿಂದ ಅಧಿಕಾರಿಗಳು ದಾಖಲೆಗಳು ಸರಿ ಇಲ್ಲ ಎಂಬ ಒಂದೇ ಕಾರಣಕ್ಕೆ ಸಾಗುವಳಿದಾರರ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ದೂರಿದರು.

ಅರಣ್ಯ ಹಕ್ಕು ಕಾಯಿದೆಗೆ ೭೫ ವರ್ಷಗಳ ದಾಖಲೆ ಕೊಡಬೇಕೆಂಬ ಷರತ್ತನ್ನು ಸಡಿಲಗೊಳಿಸಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಮುಳುಗಡೆ ಸಂತ್ರಸ್ಥರಿದ್ದು, ಸ್ಥಳಾಂತರಗೊಂಡ ಸ್ಥಳದಲ್ಲಿ ದಾಖಲೆ ತೋರಿಸಲು ಸಾಧ್ಯವಾಗುವುದಿಲ್ಲ. ಈ ಕಾನೂನಿಗೆ ತಿದ್ದುಪಡಿ ತರುವುದೊಂದೇ ಇರುವ ಪರಿಹಾರ. ಈ ದಿಸೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಪ್ರಯತ್ನ ಮಾಡಬೇಕು ಎಂದು ಮಧು ಬಂಗಾರಪ್ಪ ಆಗ್ರಹಿಸಿದರು.


ಸೋದರರಂತೆ ಬಾಳೋಣ

ಶಿವಮೊಗ್ಗ ಮತ್ತು ಇತರೆ ಜಿಲ್ಲೆಗಳಲ್ಲಿ ಧರ್ಮ,ಜಾತಿ ಎಂದು ಅಹಿತಕರ ಘಟನೆಗಳು ನಡೆಯುತ್ತಿವೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಎಲ್ಲಾ ಧರ್ಮ,ಜಾತಿಯವರು ಸೋದರರಂತೆ ಬದುಕುವಲ್ಲಿ ಸುಖವಿದೆ. ತಂದೆ ಬಂಗಾರಪ್ಪ ಅವರೇ ಈ ವಿಚಾರದಲ್ಲಿ ನಮಗೆ ಆದರ್ಶ ಅವರು ಎಲ್ಲಾ ಧರ್ಮದ ಹಿತಚಿಂತಕರಾಗಿದ್ದರು. ಅವರ ಮಾರ್ಗದಲ್ಲಿಯೇ ರಾಜಕಾರಣ ಮಾಡುತ್ತಿರುವ ನಮಗೆ ಎಲ್ಲರೂ ಸೋದರರಂತೆ ಕಾಣುತ್ತಾರೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಕಾನೂನು ಬದಲಾಗಬೇಕು
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮೆಡಿಕಲ್ ವಿದ್ಯಾರ್ಥಿ ನವೀನ್ ಉಕ್ರೇನ್‌ನಲ್ಲಿ ಸಾವಿಗೀಡಾಗಿದ್ದು, ತುಂಬಾ ನೋವಿನ ವಿಚಾರ. ವೈದ್ಯನಾಗಲಿದ್ದ ಮಗನನ್ನು ಕಳೆದುಕೊಂಡ ಪೋಷಕರಿಗೆ ನಾನು ಸಾಂತ್ವನ ಹೇಳುತ್ತೇನೆ. ಈ ಘಟನೆ ದುರಾದೃಷ್ಟಕರವಾದುದಾಗಿದೆ. ನಮ್ಮ ದೇಶದ ವೈದ್ಯಕೀಯ ಶಿಕ್ಷಣ ನೀತಿ ಬದಲಾಗಬೇಕು. ಇಲ್ಲಿ ವೈದ್ಯಕೀಯ ಶಿಕ್ಷಣ ದುಬಾರಿಯಾಗಿದೆ. ಈ ಕಾರಣದಿಂದಾಗಿಯೇ ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್‌ನಂತಹ ದೇಶಗಳಿಗೆ ಹೋಗುತ್ತಿದ್ದಾರೆ. ಇಲ್ಲಿಬ ವ್ಯವಸ್ಥೆ ಸರಿಯಿದ್ದರೆ ಪ್ರತಿಭಾವಂತರ ಪಲಾಯನ ಆಗುವುದಿಲ್ಲ. ಕೇಂದ್ರ ಸರಕಾರ ಈ ದಿಸೆಯಲ್ಲಿ ಕಾನೂನು ಬದಲು ಮಾಡಿ ಸುಲಭ ದರದಲ್ಲಿ ವೈದ್ಯಕೀಯ ಶಿಕ್ಷಣ ನಮ್ಮ ಮಕ್ಕಳಿಗೆ ಸಿಗುವಂತಾಗಬೇಕು ಎಂದು ಮಧುಬಂಗಾರಪ್ಪ ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್, ಮಾಜಿ ಶಾಸಕ ಆರ್. ಪ್ರಸನ್ನಕುಮಾರ್, ಮುಖಂಡರಾದ ಹುಲ್ತಿಕೊಪ್ಪ ಶ್ರೀಧರ್, ಬಂಡಿ ರಾಮಚಂದ್ರ, ಪಿ.ಒ. ಶಿವಕುಮಾರ್, ಶ್ವೇತಾ ಬಂಡಿ, ಇಕ್ಕೇರಿ ರಮೇಶ್, ಪಾರ್ವತಮ್ಮ, ಜಿ.ಡಿ. ಮಂಜುನಾಥ್, ಪಲ್ಲವಿ, ಚಿನ್ನಪ್ಪ, ರವಿಕುಮಾರ್, ಎಸ್.ಸಿ.ರಾಮಚಂದ್ರ ಮೊದಲಾದವರಿದ್ದರು.

ಶುಭಾಶಯಗಳ ಸುರಿಮಳೆ

ಮಧು ಬಂಗಾರಪ್ಪ ಅವರ ಶಿವಮೊಗ್ಗದ ಮನೆಯಲ್ಲಿ ಬುಧವಾರ ಬೆಳಗ್ಗೆ ಬಿಡುವಿಲ್ಲದ ಜನಸಂದಣಿ ಇತ್ತು. ಕಾಂಗ್ರೆಸ್ ನಾಯಕರು, ಮುಂಚೂಣಿ ಕಾರ್ಯಕರ್ತರು ಹಾಗೂ ಬಂಗಾರಪ್ಪ ಅವರ ಅಭಿಮಾನಿಗಳು ಮಧು ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮೇಲ್ಮನೆ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್,ಮುಡುಬ ರಾಘವೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳು , ಕಾಂಗ್ರೆಸ್ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು, ಜಿಲ್ಲಾ ಆರ್ಯಈಡಿಗ ಸಂಘ ಸೇರಿದಂತೆ ಅನೇಕ ಸಮುದಾಯದ ಮುಖಂಡರು ಮಧು ಅವರಿಗೆ ಶುಭಾಶಯ ಕೋರಿದರು.


ಜಿಲ್ಲೆಯಲ್ಲಿ ಹೊಸದಾಗಿ ಮಾಡಿದ ಬಗರ್‌ಹುಕುಂ ಸಾಗುವಳಿಗೆ ನಮ್ಮ ಬೆಂಬಲ ಇಲ್ಲ. ಕೃಷಿ ಮತ್ತು ಇತರೆ ಉದ್ದೇಶಗಳಿಗೆ ಅರಣ್ಯ ನಾಶ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಮೊದಲಿಂದಲೂ ನಮ್ಮ ನಿಲುವು ಇದೇ ಆಗಿದೆ

-ಮಧು ಬಂಗಾರಪ್ಪ, ಮಾಜಿ ಶಾಸಕ

Ad Widget

Related posts

ಆಯುಷ್ ವೈದ್ಯರ ಪ್ರತಿಭಟನೆ

Malenadu Mirror Desk

ಜಿಲ್ಲಾ ಮಟ್ಟದ ಕರೋಕೆ ಸ್ಪರ್ಧೆ

Malenadu Mirror Desk

ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಇಬ್ಬರು ಆಸ್ಪತ್ರೆಗೆ ದಾಖಲು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.