ತೀ.ನಾ. ಶ್ರೀನಿವಾಸ್ ಅವರು ಕಾಂಗ್ರೆಸ್ ಮುಖಂಡರೇ ಬಗರ್ ಹುಕುಂ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಇದು ಸರಿಯಾದ ಮಾತು. ಅವರಿಗೆ ಪಶ್ಚಾತ್ತಾಪವಾದರೆ ಮಾ. 7 ರಂದು ಬಗರ್ ಹುಕುಂ ಹೋರಾಟ ಸಮಿತಿಯಿಂದ ಶಿಕಾರಿಪುರದಲ್ಲಿ ನಮ್ಮ ಮನೆಗೆ ಮುತ್ತಿಗೆ ಹಾಕುವ ಬದಲು ಕಾಂಗ್ರೆಸ್ ನಾಯಕರ ಮನೆ ಮುಂದೆ ಪ್ರತಿಭಟನೆ ಮಾಡಲಿ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ದೀರ್ಘ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರದ ಆಡಳಿತದ ತಪ್ಪಿನಿಂದಾಗಿ ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ನ್ಯಾಯ ಒದಗಿಸಲು ಇದುವರೆಗೂ ಆಗಿಲ್ಲ ಎಂದು ಆರೋಪಿಸಿದರು.
2006 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅನುಸೂಚಿತ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆ ಕಾಯ್ದೆ ಪ್ರಕಾರ, 2005 ರ ಹಿಂದೆ ಸಾಗುವಳಿ ಮಾಡಿರುವ ರೈತರು ಅದರಲ್ಲಿ ಎಸ್.ಸಿ., ಎಸ್.ಟಿ.ಯವರು ೨೫ ವರ್ಷದ ದಾಖಲೆ ನೀಡಬೇಕು. ಇನ್ನುಳಿದವರು ೭೫ ವರ್ಷದ ದಾಖಲೆ ನೀಡಬೇಕು ಎಂಬ ಷರತ್ತು ವಿದಿಸಲಾಗಿತ್ತು. ೨೦೦೭ ರಲ್ಲಿ ಕೂಡ ಇದರಲ್ಲಿರುವ ನ್ಯೂನತೆಯನ್ನು ಸರಿಪಡಿಸಬಹುದಿತ್ತು. ತಿದ್ದುಪಡಿ ತರಬಹುದಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ಮಾಡಲಿಲ್ಲ. ಸುಮಾರು ೧ ಲಕ್ಷ ರೈತರಿಗೆ ಈಗ ನ್ಯಾಯ ಒದಗಿಸಲು ಆಗುತ್ತಿಲ್ಲ. ಇದರ ಜೊತೆಗೆ ಪರಿಸರವಾದಿಗಳು ಕೂಡ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದಾರೆ. ಕೆಲವು ದಾಖಲಾತಿಗಳನ್ನು ಕೋರ್ಟ್ ಗೆ ನೀಡಿದ್ದಾರೆ. ಅದರಲ್ಲಿ ಒಂದೇ ಕುಟುಂಬಕ್ಕೆ ನಾಲ್ಕು ವ್ಯಕ್ತಿಗಳಿಗೆ 35 ಎಕರೆ ಭೂಮಿಯನ್ನು ನೀಡಿರುವ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬಗರ್ ಹುಕುಂ ಸಮಸ್ಯೆ ಇನ್ನೂ ಜೀವಂತವಾಗಿ ಉಳಿದಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೇಯರ್ ಸುನಿತಾ ಅಣ್ಣಪ್ಪ, ಪ್ರಮುಖರಾದ ಎಸ್. ದತ್ತಾತ್ರಿ, ಜ್ಞಾನೇಶ್ವರ್, ಕೆ.ಇ. ಕಾಂತೇಶ್, ಧರ್ಮ ಪ್ರಸಾದ್, ಎಸ್. ಕುಮಾರ್, ಎಸ್.ಎಸ್. ಜ್ಯೋತಿಪ್ರಕಾಶ್, ಮಾಲತೇಶ್, ಶಿವರಾಜ್ ಮೊದಲಾದವರಿದ್ದರು.