ಈ ನಾಡಿಗೆ ಬೆಳಕು ಕೊಟ್ಟ ಶರಾವತಿ ಸಂತ್ರಸ್ತರು ಇಂದು ಸರಕಾರವೇ ಕೊಟ್ಟ ಭೂಮಿಯಲ್ಲಿ ಉಳುಮೆ ಮಾಡಿಕೊಂಡಿದ್ದರೂ, ಅದು ನಮ್ಮದೆಂಬ ಭಾವನೆ ಇಲ್ಲದೆ ಅತಂತ್ರರಾಗಿದ್ದಾರೆ. ಕಾನೂನು ತೊಡಕುಗಳನ್ನು ನಿವಾರಿಸಿ ಎಂದು ಮನವಿ ಮಾಡಲು ಸಂಸದರ ಮನೆಗೆ ಅವರ ಮತದಾರರಾದ ನಾವು ಬರುತ್ತೇವೆ ಎಂದರೆ ಸಂಸದರಿಗೇಕೆ ಭಯವಾಗಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀನ ಶ್ರೀನಿವಾಸ್ ಹೇಳಿದರು.
ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿದಾರರಿಗೆ, ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ಮಾ. ೭ ರಂದು ಶಿಕಾರಿಪುರದ ಸಂಸದರ ಮನೆಗೆ ಭೇಟಿ ನೀಡಿ ನ್ಯಾಯ ಕೇಳಲು ಬರುತ್ತೇವೆ ಎಂದರೆ ಸಂಸದರು ಕಾಂಗ್ರೆಸ್ ನಾಯಕರ ಮನೆ ಮುಂದೆ ಧರಣಿ ಮಾಡಲಿ ಎಂದು ಲಘುವಾಗಿ ಮಾತನಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಹೆಸರೇಳಿಕೊಂಡು ಗೆದ್ದು ಈಗ ಹೀಗೆ ಮಾತನಾಡುವುದು ಸರಿಯಲ್ಲ. ನಮ್ಮ ಸಮಸ್ಯೆ ಇತ್ಯರ್ಥವಾಗದಿದ್ದರೆ ನಾವು ಮುಖ್ಯಮಂತ್ರಿ ಮನೆ ಮಂದೆಯೂ ಪ್ರತಿಭಟನೆ ಮಾಡುತ್ತೇವೆ. ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿರುವ ಎಲ್ಲ ಶಾಸಕರ ಮನೆ ಮುಂದೆಯೂ ಧರಣಿ ಮಾಡುತ್ತೇವೆ ಎಂದು ಹೇಳಿದರು.
ಈ ದೇಶದಲ್ಲಿ ಉಳುವವನೆ ಭೂಮಿ ಒಡೆಯ ಕಾನೂನು ಜಾರಿಗೆ ತಂದ್ದೇ ಕಾಂಗ್ರೆಸ್ ದೇವರಾಜ್ ಅರಸು ಅವರ ಕಾಂಗ್ರೆಸ್ ಸರಕಾರ ತಂದ ಭೂ ಸುಧಾರಣಾ ಕಾಯಿದೆಯಿಂದ ಲಕ್ಷಾಂತರ ರೈತರಿಗೆ ಭೂಮಿ ಸಿಕ್ಕಿದೆ. ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಗರ್‌ಹುಕುಂ ಕಾಯಿದೆ ತಂದರು. ಫಾರಂ ನಂ.೫೦,೫೩ ಜಾರಿಗೆ ತಂದು ಲಕ್ಷಾಂತರ ಜನರಿಗೆ ಭೂಮಿ ನೀಡಿದರು. ಸಂಸದರು ಇತಿಹಾಸ ತಿಳಿದು ಮಾತನಾಡಬೇಕು ಎಂದು ಶ್ರೀನಿವಾಸ್ ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರ ಮತ್ತು ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗಳು ಹಾಗೆಯೇ ಇವೆ. ಬಿಜೆಪಿ ಆಡಳಿತದ ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದೇ ಅನುಕೂಲ ಮಾಡಿಕೊಡಲಿಲ್ಲ. ಬೇಜವಾಬ್ದಾರಿಯಿಂದ ನಡೆದುಕೊಂಡಿವೆ. ಒಂದು ರೀತಿಯಲ್ಲಿ ದ್ರೋಹ ಬಗೆದಿದೆ. ಕಾಯ್ದೆಗೆ ತಿದ್ದುಪಡಿ ತರಬೇಕಿತ್ತು. ಅದನ್ನು ಮಾಡಲಿಲ್ಲ. ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕಿತ್ತು. ಅದನ್ನೂ ಸಲ್ಲಿ ಸಿ ಲಿಲ್ಲ ಎಂದು ಆರೋಪಿಸಿದರು.
ಸಂಸದ ರಾಘವೇಂದ್ರ ಅವರು ಕೇಂದ್ರದ ಮೇಲೆ ಯಾವುದೇ ಒತ್ತಡ ಹಾಕಲಿಲ್ಲ. ಒಂದು ಕಡೆ ಮುಖ್ಯಮಂತ್ರಿ ಮತ್ತು ಸಂಸದರು ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿದರೆ, ಮತ್ತೊಂದು ಕಡೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರೈತರು ಸಲ್ಲಿಸಿದ ಸುಮಾರು ೮೦ ಸಾವಿರಕ್ಕೂ ಹೆಚ್ಚು ರೈತರ ಅರ್ಜಿಯನ್ನು ವಜಾ ಮಾಡಲಾಗುತ್ತಿದೆ. ಹೀಗೆ ಉಪ ವಿಭಾಗ ಮಟ್ಟದ ಸಮಿತಿ ರೈತರ ಅರ್ಜಿ ವಜಾ ಮಾಡಿದರೆ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ಜಿಲ್ಲಾಧಿಕಾರಿ ವಜಾ ಮಾಡಿದರೆ ಹೈಕೋರ್ಟ್ ಗೆ ಹೋಗಬೇಕಾಗುತ್ತದೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ಥರು ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಭೂಮಿಯನ್ನೇ ತ್ಯಾಗ ಮಾಡಿದ್ದಾರೆ. ಸುಮಾರು ೨೫ ಸಾವಿರ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಇದುವರೆಗೂ ಅವರಿಗೆ ವಾಸದ ಮನೆಯಾಗಲಿ, ಭೂಮಿಯ ಹಕ್ಕುಪತ್ರವಾಗಲಿ ದೊರೆತಿಲ್ಲ. ಸರ್ಕಾರದ ಆಡಳಿತ ಅವ್ಯವಸ್ಥೆಗೆ ಇದು ಸಾಕ್ಷಿಯಾಗಿದೆ. ಶರಾವತಿ ವಿದ್ಯುತ್ ಯೋಜನೆಯಿಂದ ಲಕ್ಷಾಂತರ ಕೋಟಿ ರೂ. ಆದಾಯ ಬಂದಿದ್ದರೂ ಅವರ ಸಮಸ್ಯೆಯನ್ನು ಬಗೆಹರಿಸಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದರು.
ತಾವು ರೈತಪರ ಹೋರಾಟಗಾರರು ಎಂದು ಬಿಂಬಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು ಬಗರ್ ಹುಕುಂ ಸಾಗುವಳಿದಾರರ ಮತ್ತು ಶರಾವತಿ ಮುಳುಗಡೆ ಸಂತ್ರಸ್ಥರ ಬಗ್ಗೆ ಚರ್ಚೆಯನ್ನೇ ಮಾಡುತ್ತಿಲ್ಲ. ವರಾಹಿ, ಚಕ್ರಾ, ಸಾವೆಹಕ್ಲು ವಿದ್ಯುತ್ ಯೋಜನೆಗೆ ಭೂಮಿ ಕಳೆದುಕೊಂಡವರ ಸ್ಥಿತಿಯೂ ಇದೇ ಆಗಿದೆ. ಶಾಸಕ ಹಾಲಪ್ಪ, ಮುಳುಗಡೆ ರೈತ ಪ್ರತಿನಿಧಿಗಳು, ರಾಜ್ಯಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದರು. ಮುಖ್ಯಮಂತ್ರಿಗಳು ೯೬೦೦ ಎಕರೆ ಅರಣ್ಯ ಭೂಮಿಯನ್ನು ಶರಾವತಿ ಮುಳುಗಡೆ ಸಂತ್ರಸ್ಥರಿಗಾಗಿ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದರು. ಆದರೆ, ಸಭೆ ನಡೆದು ೫ ತಿಂಗಳಾದರೂ ಅದರ ನಿರ್ಣಯವನ್ನೇ ಬರೆದಿಲ್ಲ .ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪವೂ ಹೋಗಿಲ್ಲ ಎಂದು ದೂರಿದರು.
ಠುಸ್ ಫೋರ್ಸ್
ಇದರ ಜೊತೆಗೆ ಅಡಿಕೆ ಹಾನಿಕರ ವಸ್ತು ಎಂದು ಕೇಂದ್ರದ ಕೆಲವು ಮಂತ್ರಿಗಳು, ಕೆಲವು ಸಂಸದರು ಸಂಸತ್‌ನಲ್ಲಿಯೇ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ರಾಜ್ಯದ ಸಂಸದರು ಯಾವುದೇ ಧ್ವನಿ ಎತ್ತಿಲ್ಲ. ರಾಜ್ಯ ಸರಕಾರ ರಚಿಸಿದ್ದ ಟಾಸ್ಕ್ ಫೋರ್ಸ್ ಠುಸ್ ಫೋರ್ಸ್ ಆಗಿದೆ. ಅಡಕೆಗೆ ಇರುವ ಕಳಂಕವನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಸುಪ್ರೀಂ ಕೋರ್ಟ್ ಗೂ ಯಾವ ಪ್ರಮಾಣ ಪತ್ರವನ್ನೂ ಸಲ್ಲಿಸಿಲ್ಲ. ರಾಘವೇಂದ್ರ ಅವರು ಅಡಕೆ ಮಾನ ಹರಾಜು ಮಾಡುತ್ತಿರುವ ಗುಟ್ಕಾ ಲಾಬಿ ವಿರುದ್ಧ ಮಾತನಾಡಲಿ ಎಂದು ಆಗ್ರಹಿಸಿದರು.
ಈ ಎಲ್ಲಾ ವಿಷಯಗಳನ್ನಿಟ್ಟುಕೊಂಡು ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ, ಬಗರ್ ಹುಕುಂ ಮತ್ತು ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಸಂಸದರ ಮನೆಗೆ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹೋರಾಟದಲ್ಲಿ ಬಗರ್ ಹುಕುಂ ಸಾಗುವಳಿದಾರರು, ಸಂತ್ರಸ್ಥರು ಸೇರಿದಂತೆ ಸುಮಾರು ೫೦೦ ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದರು. ಪರಶುರಾಮ್, ಧರ್ಮೇಂದ್ರ ಇದ್ದರು.