ಹಿಜಾಬ್ ಕುರಿತು ರಾಜ್ಯ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಹಿಜಾಬ್ ತೀರ್ಪು ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಹಿಜಾಬ್ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಇದೀಗ ನ್ಯಾಯಾಲಯದ ತೀರ್ಪು ಹೊರ ಬಿದ್ದಿದೆ. ಇದನ್ನು ನಾವುಗಳು ಸ್ವಾಗತಿಸುತ್ತೇವೆ ಎಂದರು.
ಇದುವರೆಗೂ ವಿದ್ಯಾರ್ಥಿನಿಯರಿಗೆ ಪಾಠ, ಪ್ರವಚನಗಳು ಸಿಗದಂತಾಗಿದೆ. ಮುಂದಿನ ದಿನಗಳಲ್ಲಿ ಅವರುಗಳು ಶಾಲಾ ಕಾಲೇಜುಗಳಿಗೆ ತೆರಳಿ, ಪಾಠ, ಪ್ರವಚನಗಳು ಕೇಳುವಂತಾಗಲಿ. ಈ ನಿಟ್ಟಿನಲ್ಲಿ ಮಾರ್ಗ ದರ್ಶನ ಅಗತ್ಯವಾಗಿದೆ. ಆ ಕಾರ್ಯವನ್ನು ಹಿಜಾಬ್ ಬೆಂಬಲಿಸುತ್ತಿದ್ದವರು ಮಾಡಬೇಕಾಗಿದೆ ಎಂದರು.
ರಾಜ್ಯದಲ್ಲಿ ನಾಲ್ಕು ಸಚಿವ ಸ್ಥಾನಗಳು ಖಾಲಿ ಇದ್ದು, ಅವುಗಳಿಗೆ ಯಾರನ್ನು ನೇಮಕ ಮಾಡಬೇಕೆಂದು ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಯುವಕರನ್ನೋ, ಅಥವಾ ಹಿರಿಯರನ್ನೋ ಎಂಬುದು ನಮ್ಮ ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಯಾರನ್ನು ನೇಮಿಸಿದರೂ ನಾವು ಒಪ್ಪಿಕೊಳ್ಳುತ್ತೇವೆ ಎಂದರು.
ಹಿಜಾಬ್ ಕುರಿತು ನ್ಯಾಯಾಲಯ ನೀಡಿರುವ ತೀರ್ಪಿಗೆ ಎಲ್ಲರೂ ತಲೆಬಾಗೋಣ. ಇಂದಿನಿಂದ ವಿದ್ಯಾರ್ಥಿನಿಯರು ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಧರ್ಮದ ಆಚರಣೆ ಶಾಲಾ ಕಾಲೇಜುಗಳಲ್ಲಿ ಆನ್ವಯಿಸುವುದಿಲ್ಲ ಎಂಬ ತೀರ್ಪನ್ನು ನ್ಯಾಯಾಲಯ ನೀಡಿದ್ದು, ಆಚರಣೆಯನ್ನು ಮನೆಗೆ ಸೀಮಿತಗೊಳಿಸಿ ಶಾಲಾ ಕಾಲೇಜಿನಲ್ಲಿ ಸಮವಸ್ತ್ರ ಧರಿಸುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಒತ್ತು ನೀಡಬೇಕು.
- ಬಿ.ವೈ.ರಾಘವೇಂದ್ರ, ಸಂಸದರು, ಶಿವಮೊಗ್ಗ