ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಮರು ಪರಿಶೀಲಿಸಿ ಅರ್ಹರಿಗೆ ಭೂಮಿ ನೀಡಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿದ್ದರೂ ಅರ್ಜಿಗಳನ್ನು ವಿಲೇವಾರಿ ಮಾಡದೆ ನಿರ್ಲಕ್ಷ್ಯ ತಾಳಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಸಿ, ಉಪವಿಭಾಗಾಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಮಲೆನಾಡು ಹೋರಾಟ ಸಮಿತಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಹೇಳಿದರು.
ಗುರುವಾರ ಶಿವಮೊಗ್ಗ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಯಲ್ಲಿ ೯೦ ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ ೪೮ ಸಾವಿರ ಅರ್ಜಿ ಗಳನ್ನು ವಜಾ ಮಾಡಲಾಗಿದೆ. ಕೆಲವೇ ಕೆಲವು ಅರ್ಜಿಗಳನ್ನು ಇತ್ಯರ್ಥ ಮಾಡಿ, ಹೆಚ್ಚಿನ ಅರ್ಜಿಗಳನ್ನು ಉಳಿಸಿಕೊಳ್ಳಲಾಗಿದೆ ಎಂದರು.
ಅರ್ಜಿ ವಜಾಗೊಂಡ ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಮೇಲ್ಮನವಿ ಪರಿಶೀಲಿಸಿದ ಸುಪ್ರೀಂ ಕೋರ್ಟ್ ಅರ್ಜಿಗಳನ್ನು ವಿವರವಾಗಿ ಪರಿಶೀಲಿಸಿ ೨೦೧೯ ರಲ್ಲಿ ಅರ್ಹರಿಗೆ ‘ಭೂಮಿ ನೀಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಯರಿಗೆ ಆದೇಶಿಸಿತ್ತು. ಆದರೆ ಇದುವರೆಗೂ ಪರಿಶೀಲನೆ ನಡೆಸಿಲ್ಲ ಎಂದರು.
೧೮ ತಿಂಗಳ ಒಳಗಾಗಿ ಅರ್ಜಿ ವಿಲೇವಾರಿ ಮಾಡುವುದಾಗಿ ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದರು. ಈ ಅವಧಿ ಕೂಡ ಮುಗಿದು ಹೋಗಿದೆ. ಈಗ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲು ಅರ್ಜಿಗಳನ್ನು ವಜಾ ಮಾಡುವಂತೆ ಜಿಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಅರ್ಜಿ ವಜಾ ಮಾಡುವುದೇ ರೈತರಿಗೆ ನೀಡುವ ನ್ಯಾಯ ಎಂದು ಸರ್ಕಾರ ಭಾವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂರು ಎಕರೆ ಒಳಗೆ ಅರಣ್ಯ ‘ಭೂಮಿ ಜೀವನೋಪಾಯಕ್ಕೆ ಸಾಗುವಳಿ ಮಾಡುತ್ತಿದ್ದರೆ ಅಂತಹವರನ್ನು ಒಕ್ಕಲೆಬ್ಬಿಸಬಾರದೆಂಬ ಸರ್ಕಾರಿ ಆದೇಶವಿದ್ದರೂ ಅದನ್ನು ಪಾಲನೆ ಮಾಡುತ್ತಿಲ್ಲ. ೧೯೭೮ ರ ಪೂರ್ವ ದಲ್ಲಿ ಸಾಗುವಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸಬಾರದೆಂದು ಸರ್ಕಾರ ೭ ಆದೇಶಗಳನ್ನು ಮಾಡಿದೆ. ಆದರೆ ಇವು ಯಾವೂ ಪಾಲನೆ ಆಗುತ್ತಿಲ್ಲ ಎಂದರು.
ಸೊರಬ ತಾಲೂಕಿನ ಸಿಡ್ಡಿಹಳ್ಳಿ, ಗೆಂಡ್ಲಾ, ತಾಳಗುಪ್ಪದಲ್ಲಿ ೧೫೦ ಜನ ರೈತರ ಮೇಲೆ ಅರಣ್ಯ ಇಲಾಖೆ ಕೇಸು ಹಾಕಿದೆ. ಪರಿಸರವಾದಿಗಳ ಹೆಸರಿನಲ್ಲಿ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ಒಟ್ಟಿನಲ್ಲಿ ರೈತರು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ ಎಂದು ದೂರಿದರು.
ಜಿಲ್ಲೆಯ ಯಾವ ಶಾಸಕರು, ಸಚಿವರು, ನಿಕಟಪೂರ್ವ ಮುಖ್ಯಮಂತ್ರಿ, ಸಂಸದರು ಕೂಡ ಬಗರ್‌ಹುಕುಂ ರೈತರು, ಶರಾವತಿ ಸಂತ್ರಸ್ತರ ಬಗ್ಗೆ ಚಕಾರ ಎತ್ತುತ್ತಿಲ್ಲ. ಶರಾವತಿ ಸಂಸತ್ರಸ್ತರಿಗೆ ಭೂಮಿ ನೀಡದಂತೆ ನ್ಯಾಯಾಲಯದ ಆದೇಶವಾಗಿದ್ದರೂ ಕೂಡ ಅದರ ವಿರುದ್ಧ ಇದುವರೆಗೂ ಸರ್ಕಾರ ಮೇಲ್ಮನವಿ ಸಲ್ಲಿಸಿಲ್ಲ. ಇದು ಬಿಜೆಪಿ ಸರ್ಕಾರದ ರೈತಪರ ಕಾಳಜಿ ಎಂದು ಶ್ರೀನಿವಾಸ್ ಟೀಕಿಸಿದರು.
ಜಿಲ್ಲಾಧಿಕಾರಿ,ಸಾಗರ ಹಾಗೂ ಶಿವಮೊಗ್ಗ ಉಪವಿಭಾಗಾಧಿಕಾರಿಗಳು ತಕ್ಷಣ ಜಿಲ್ಲೆಯ ರೈತರಿಗಾಗುತ್ತಿರುವ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಹಾಗೂ ನ್ಯಾಯಾಂಗ ಹೋರಾಟವನ್ನು ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರಿಗೆ ಈ ಜಿಲ್ಲೆಯ ಜನರ ಋಣತೀರಿಸುವ ಬಯಕೆ ಇದ್ದರೆ ಬಗರ್‌ಹುಕುಂ ಹಾಗೂ ಶರಾವತಿ ಸಂತ್ರಸ್ಥರ ಪರವಾಗಿ ಕೇಂದ್ರ ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಮಾಡಿಸಬೇಕು ಎಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪರಶುರಾಮ, ಬೂದ್ಯಪ್ಪ, ಪರಶುರಾಮ, ಬಂಗಾರಪ್ಪ ಇದ್ದರು.