ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಜಾ ಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ರಾಜ್ಯ ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಏ.21 ರಂದು ಮಧ್ಯಾಹ್ನ12 ಗಂಟೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನ ದಲ್ಲಿ ರೈತರ ರಾಜಕೀಯ ತೀರ್ಮಾನ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ಸರ್ಕಾರ ಸುಗ್ರೀವಾಜ್ಞೆಮೂಲಕ ಜಾರಿಗೆ ತಂದಂತಹ ಕೃಷಿ ಕಾಯ್ದೆಗಳನ್ನು ರೈತರ 13 ತಿಂಗಳ ನಿರಂತರ ಹೋರಾಟದ ಫಲವಾಗಿ ಭಾರತ ಸರ್ಕಾರ ಶಾಸನಬದ್ಧವಾಗಿ ವಾಪಸ್ಸು ಪಡೆದಿದೆ. ಆದರೆ ರಾಜ್ಯ ಸರ್ಕಾರ ವಾಪಾಸ್ಸು ಪಡೆಯುವಲ್ಲಿ ವಿಳಂಬ ತಂತ್ರಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆದಿಲ್ಲ ಹಾಗೂ ಯಾವುದೇ ಚರ್ಚೆ ನಿರ್ಧಾರಗಳನ್ನು ಮಾಡದೆ ರೈತ ವಿರೋಧಿ ಧೋರಣೆ ಮುಂದುವರೆಸುತ್ತಿದೆ. ಇದು ರೈತರ ಮಕ್ಕಳನ್ನು ಬೀದಿಪಾಲು ಮಾಡಿ ಭೂಮಿಯನ್ನು ರೈತರಿಂದ ಕಿತ್ತುಕೊಳ್ಳಲು ನಡೆಸಿರುವ ಹುನ್ನಾರ ಎಂದರು.
ರಾಗಿ, ಭತ್ತ, ತೊಗರಿ, ಗೋಧಿ, ಜೋಳ ಖರೀದಿ ಕೇಂದ್ರಗಳನ್ನು ಮುಚ್ಚಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡಿಲ್ಲ. ಹಾಗಾಗಿ ರೈತರು ಬೆಳೆದ ಫಸಲುನ್ನು ಮಾರಾಟ ಮಾಡಲಾಗದೆ ಅರ್ಧ ಬೆಲೆಗೆ ಮಾರುತ್ತಿದ್ದಾರೆ. ಈ ಹಿಂದೆ ರೈತರಿಗೆ ರಾಷ್ಟ್ರೀಯ ವಿಪತ್ತಿನ ಕೆಳಗಡೆ ಕೊಡಬೇಕಾದ ನಷ್ಟದ ಹಣವನ್ನು ರೈತರಿಗೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬಗರ್‌ಹುಕುಂ ಸಾಗುವಾಳಿದಾರರಿಗೆ ಸರ್ಕಾರ ಹಕ್ಕುಪತ್ರ ನೀಡಿಲ್ಲ. ಮಲೆನಾಡಿನ ಭಾಗಗಳಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿ ಆನೆಗಳು, ಕಾಡು ಪ್ರಾಣಿಗಳು ಹಳ್ಳಿಗಳಲ್ಲಿ ವಾಸ ಮಾಡಲು ಪ್ರಾರಂಭಿಸಿವೆ ಎಂದರು.
ಕೇಂದ್ರ ಸರ್ಕಾರ ರಸಗೊಬ್ಬರ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್‌ಚ್ಛಕ್ತಿ, ಕಬ್ಬಿಣ, ಸಿಮೆಂಟ್ ಮುಂತಾದ ಕಟ್ಟಡ ಸಾಮಗ್ರಿಗಳ ಬೆಲೆಯನ್ನು ದಿನೇ ದಿನೇ ಏರಿಸುತ್ತಿದೆ. ಈ ಕಾರಣದಿಂದ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಿದೆ. ಹೋಟೆಲ್ ಮಾಲೀಕರು ಸಹ ಬೆಲೆ ಏರಿಕೆ ಮಾಡಿದ್ದಾರೆ. ಜನ ಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ರೈತರು ಕೃಷಿ ಕೂಲಿ ಕಾರ್ಮಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸುವಂತೆ ಮನವಿ ಮಾಡಿಕೊಂಡರು. ಶಿವಮೊಗ್ಗ ಜಿಲ್ಲೆಯಿಂದಲೂ ಸಾವಿರಾರು ರೈತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು. ಡಾ.ಚಿಕ್ಕಸ್ವಾಮಿ, ಹಿಟ್ಟೂರು ರಾಜು, ಕೆ.ರಾಘವೇಂದ್ರ, ಎಂ.ಡಿ.ನಾಗರಾಜ್ ಉಪಸ್ಥಿತರಿದ್ದರು.
ಬಿಜೆಪಿ ಸರ್ಕಾರ ಅಭಿವೃದ್ಧಿ ಮಾಡದೇ ಅದನ್ನು ಮುಚ್ಚಿಡಲು ಬೇಡವಾದ ವಿಷಯಗಳತ್ತ ಜನರ ಗಮನಸೆಳೆಯುತ್ತಿದೆ. ಹಲಾಲ, ಜಟ್ಕಾ, ಜಾತ್ರೆಗಳಲ್ಲಿ ಅಂಗಡಿ ಹಾಕುವುದು, ಆಜಾನ್ ಈ ವಿಷಯಕ್ಕೆ ಸಂಬಂಧಿಸಿದಂತೆ ಧರ್ಮದ ಲೇಪನ ತಂದು ಮರೆಮಾಚುತ್ತಿದೆ. ಹೀಗೆ ಪ್ರಚಾರ ಮಾಡುವವರ ಮಕ್ಕಳು ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಸರ್ಕಾರಿ ಹುದ್ದೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ, ಬಡವರ ಮಕ್ಕಳು ಮಾತ್ರ ಜಾತ್ರೆಯಲ್ಲಿ ಅಂಗಡಿ ಹಾಕಬೇಕು. ಮಾಂಸದ ವ್ಯಾಪಾರ ಮಾಡಬೇಕು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
-ಹೆಚ್.ಆರ್.ಬಸವರಾಜಪ್ಪ