ಶಿವಮೊಗ್ಗ ಎಫ್.ಎಂ.-90.8 ಸಮುದಾಯ ರೇಡಿಯೋ ಕೇಂದ್ರ ವಿನೂತನ ರೀತಿಯಲ್ಲಿ ಏಪ್ರಿಲ್ 22ರಂದು ತನ್ನ ಪ್ರಸಾರವನ್ನು ಆರಂಭಿಸಲಿದೆ ಎಂದು ನಿಲಯದ ನಿರ್ದೇಶಕ ಜಿ.ಎಲ್. ಜನಾರ್ಧನ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಡಿಯೋ ಶಿವಮೊಗ್ಗ, ಸಮುದಾಯ ಬಾನುಲಿ ಕೇಂದ್ರ, ಕೊಡಚಾದ್ರಿ ಸಮಗ್ರ ಅಭಿವೃದ್ಧಿ ಸಂಸ್ಥೆ ಇವರ ಸಹಯೋಗದಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಶಿವಮೊಗ್ಗದಲ್ಲಿ ಮಾರ್ಚ್ ತಿಂಗಳಿನಿಂದಲೇ ಎಫ್.ಎಂ. ಕೇಂದ್ರ ಪ್ರಸಾರವಾಗುತ್ತಿದೆ. ಇದರ ಅಧಿಕೃತ ಪ್ರಸಾರವರು ಏಪ್ರಿಲ್ 22ರಿಂದ ಆರಂಭವಾಗಲಿದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ ಎಂದರು.
ಶಿವಮೊಗ್ಗ ರೇಡಿಯೋ ವಿಶೇಷ ತರಂಗಾಂತರಗಳ ಮೂಲಕ, ಆನ್ಲೈನ್ ನಲ್ಲಿ ಮತ್ತು ನೇರವಾಗಿ ಪ್ರಸಾರವಾಗಲಿದೆ. ಆನ್ ಲೈನ್ ಮೂಲಕವಾದರೆ ವಿಶ್ವದ ಯಾವುದೇ ಭಾಗದಿಂದ ಕೇಳಬಹುದು. ನೇರವಾಗಿ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಇದರ ಪ್ರಸಾರವಾಗಲಿದೆ. ಹಾಗಾಗಿ ರೇಡಿಯೋ ಶಿವಮೊಗ್ಗ್ ಎಫ್.ಎಂ. ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಕೇಳಬೇಕು ಎಂದರು.
ಸಮಗ್ರ ಶಿಕ್ಷಣ, ಸಾಂಸ್ಕೃತಿಕ ವೈಭವ, ಜಾನಪದ, ಸಂಗೀತ, ಕ್ರೀಡೆ, ಕೃಷಿ, ವಾಣಿಜ್ಯ, ಉದ್ಯೋಗ, ಕುಶಲಕಲೆ, ಕೈಗಾರಿಕೆ, ಶಿಕ್ಷಣ, ಪರಿಸರ ಮುಂತಾದ ವಿಷಯಗಳತ್ತ್ ವಿಶಿಷ್ಠ ರೀತಿಯಲ್ಲಿ ಶಿವಮೊಗ್ಗ ರೇಡಿಯೋ ಪ್ರಸಾರ ಮಾಡಲಿದೆ. ಆ ಮೂಲಕ ಹೊಸ ಪ್ರತಿಭೆಗಳಿಗೆ ಸ್ಫೂರ್ತಿ ನೀಡಲಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ವಿವಿಧ ಸೇವೆ ಮಾಡುತ್ತಿರುವ ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು, ಕೈಗಾರಿಕೆಗಳು, ಸಹಕಾರ ಸಂಸ್ಥೆಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ತಮ್ಮ ಸೇವೆಗಳ ಕುರಿತು ಜಾಹೀರಾತು ನೀಡುವ ಮೂಲಕ ಸಹಕಾರ ನೀಡಬೇಕು ಎಂದರು.
ಪ್ರಸಾರಾರಂಭದ ದಿನ ಆಸಕ್ತರು ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಕೇಂದ್ರದ ನಂಬರ್ 7259176279 ಗೆ ವ್ಯಾಟ್ಸಪ್ ಮೂಲಕ ರೆಕಾರ್ಡ್ ಮಾಡಿದ ಸಂದೇಶವನ್ನು ಕಳುಹಿಸಬಹುದಾಗಿದೆ. ರೇಡಿಯೋ ಕೇಂದ್ರಕ್ಕೂ ಬಂದು ಶುಭ ಕೋರಬಹುದು. ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರೊ. ಚಂದ್ರಶೇಖರ್ ಎ.ಎಸ್., ಡಾ. ಹೂವಯ್ಯಗೌಡ, ಬಿ. ಗುರುಪ್ರಸಾದ್, ನಿವೃತ್ತ ತಹಸೀಲ್ದಾರ್ ಸಿ.ಎಸ್. ಚಂದ್ರಶೇಖರ್ ಇದ್ದರು.