ತನ್ನ ಎರಡನೇ ಪತ್ನಿ ದೂರವಾಗಲು ಕಾರಣನಾದ ಎಂಬ ಕಾರಣಕ್ಕೆ ರೌಡಿ ಶೀಟರ್ ಹಾಗೂ ಮಸೀದಿ ಕಮಿಟಿಯ ಕಾರ್ಯದರ್ಶಿಯನ್ನು ಹಾಡ ಹಗಲೇ ಬರ್ಬರವಾಗಿ ಹತ್ಯೆಗೈದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ನಲ್ಲೂರಿನ ಖಾಸಗಿ ಬಸ್ ಏಜೆಂಟ್ ಹಾಗೂ ರೌಡಿ ಶೀಟರ್ ಕೂಡಾ ಆಗಿದ್ದ ಜಾಕಿರ್(೫೧) ಕೊಲೆಯಾದವರು. ಚನ್ನಗಿರಿ ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಸಲೀಂ ಕೊಲೆ ಆರೋಪಿಯಾಗಿದ್ದು, ಘಟನೆ ಬಳಿಕ ಆತ ಚನ್ನಗಿರಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮೃತ ಜಾಕಿರ್ ಎಂದಿನಂತೆ ಚನ್ನಗಿರಿಯ ತರಳಬಾಳು ವೃತ್ತಕ್ಕೆ ಬಸ್ ಟಿಕೆಟ್ ಬುಕಿಂಗ್ ಮಾಡಲು ಬಂದಿದ್ದ, ಈ ವೇಳೆ ಬೈಕ್‌ನಲ್ಲಿ ಬಂದಿದ್ದ ಸಲೀಂ ಜಾಕಿರ್‌ಗೆ ಚಾಕುವಿನಿಂದ ಚುಚ್ಚಿದ್ದಾನೆ. ಏಕಾಏಕಿ ತನ್ನ ಮೇಲೆ ದಾಳಿಯಾಗುತ್ತಿದ್ದಂತೆ ಜಾಕಿರ್ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಲೀಂ ಆತನ ಬೆನ್ನಟ್ಟಿ ಕೊಲೆ ಮಾಡಿದ್ದಾನೆ. ಈ ದೃಶ್ಯದ ವಿಡಿಯೊ ವೈರಲ್ ಕೂಡಾ ಆಗಿತ್ತು. ಸ್ಥಳದಲ್ಲಿದ್ದವರು ಬಿಡಿಸಲು ಮುಂದಾದರೂ ಭಯದಿಂದ ಹಿಂದೆ ಸರಿದರೆನ್ನಲಾಗಿದೆ.
ಘಟನೆ ಹಿನ್ನೆಲೆ:
ಸಲೀಂ ಹಾಗೂ ಜಾಕೀರ್ ಇಬ್ಬರೂ ನಲ್ಲೂರಿನವರಾಗಿದ್ದು. ಸಲೀಂ ಫಾತಿಮಾ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದ. ಇವರ ನಡುವೆ ಬಂದಿದ್ದ ಕೌಟುಂಬಿಕ ಕಲಹ ಪ್ರಕರಣ ಮಸೀದಿ ಕಮಿಟಿ ಮುಂದೆ ಪಂಚಾಯಿತಿಗೆ ಬಂದಿತ್ತು. ಆ ಸಂದರ್ಭ ಮಸೀದಿ ಕಾರ್ಯದರ್ಶಿಯಾಗಿದ್ದ ಜಾಕೀರ್, ಸಲೀಂ ವಿರುದ್ಧ ತೀರ್ಪು ನೀಡಿದ್ದ ಎನ್ನಲಾಗಿದೆ. ಈ ಪಂಚಾಯಿತಿ ಬಳಿಕ ಫಾತಿಮಾ ಸಲೀಂನಿಂದ ದೂರವಾಗಿ ಮತ್ತೊಂದು ಮದುವೆಯಾಗಿದ್ದರು. ತನ್ನ ಎರಡನೇ ಪತ್ನಿ ದೂರವಾಗಲು ಜಾಕೀರ್ ಕಾರಣ ಎಂದು ಹಗೆತನ ಹೊಂದಿದ್ದ ಸಲೀಂ, ಮಂಗಳವಾರ ಭೀಕರವಾಗಿ ಕೊಲೆ ಮಾಡಿ ಪೊಲಿಸ್ ಠಾಣೆಗೆ ಬಂದು ಶರಣಾಗಿದ್ದಾನೆ.