ಆಹಾರ ಹುಡುಕಿಕೊಂಡು ಭದ್ರಾವತಿ ವಿಐಎಸ್‌ಎಲ್ ಕ್ವಾರ್ಟ್ರಸ್‌ಗೆ ನುಗ್ಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಮಹಿಳೆಯೊಬ್ಬರಿಗೆ ಕಚ್ಚಿ ಗಾಯಗೊಳಿಸಿ ಜನರನ್ನು ಆತಂಕಕ್ಕೀಡು ಮಾಡಿದ್ದ ಚಿರತೆ ಸೆರೆಯಿಂದ ಭದ್ರಾವತಿ ನಿವಾಸಿಗಳು ನಿರಾಳವಾಗಿದ್ದಾರೆ. ಬೆಳಗ್ಗೆ ಕಾಣಿಸಿಕೊಂಡಿದ್ದ ಚಿರತೆ ಸುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ಗಂಟೆಗಳ ವರೆಗೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.
ಆಪರೇಷನ್ ಚಿರತೆ ಕಾರ್ಯಾಚರಣೆ:
ಮನೆ ಒಂದರ ಆವರಣದೊಳಗೆ ಚಿರತೆ ಬಂಧಿಯಾಗಿತ್ತು. ಚಿರತೆ ತಪ್ಪಿಸಿಕೊಳ್ಳದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸುತ್ತಲು ಬಲೆ ಹಾಕಿದ್ದರು. ಅರಣ್ಯ ಇಲಾಖೆಯ ವನ್ಯಜೀವಿ ವೈದ್ಯ ಡಾ. ವಿನಯ್ ಅವರು ಅರವಳಿಕೆ ಚುಚ್ಚು ಮದ್ದನ್ನು ಶೂಟ್ ಮಾಡಿದರು. ಕೆಲವೆ ಹೊತ್ತಿನಲ್ಲಿ ಚಿರತೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿತು.
ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಚಿರತೆಯನ್ನು ಬೋನ್‌ಗೆ ಹಾಕಿ, ಸುರಕ್ಷಿತವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗಂಡು ಚಿರತೆ ೫ ರಿಂದ ೬ ವರ್ಷ ವಯಸ್ಸಿನದ್ದು ಎಂದು ಅಂದಾಜಿಸಲಾಗಿದೆ. ಅರವಳಿಕೆ ಮತ್ತು ಇಳಿದ ಬಳಿಕ ಚಿರತೆಯನ್ನು ಅರಣ್ಯಕ್ಕೆ ಬಿಡಲಾಗುತ್ತದೆ. ಚಿರತೆ ಹಿಡಿಯುವ ಕಾರ್ಯಾಚರಣೆ ನೋಡಲು ದೊಡ್ಡ ಸಂಖ್ಯೆಯ ಜನ ಸೇರಿದ್ದರು. ಕಟ್ಟಡಗಳು, ವಾಹನಗಳ ಮೇಲೆ ನಿಂತು ಕಾರ್ಯಾಚರಣೆ ವೀಕ್ಷಿಸಿದರು.