ಅಗ್ನಿಪಥ್ ಯೋಜನೆ ವಿರೋಧಿಸಿ, ವಿದ್ಯಾರ್ಥಿಗಳ ಯುವಕರ ಆಕ್ರೋಶವನ್ನು ಬೆಂಬಲಿಸಿ ಹಾಗೂ ಈ ಯೋಜನೆಯನ್ನು ತಕ್ಷಣ ವಾಪಾಸ್ ಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶಿವಪ್ಪನಾಯಕ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ನಡೆಸಿದರು.
ದೇಶಾದ್ಯಂತ ಭಾರೀ ವಿರೋಧಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ ನೂತನ ಅಗ್ನಿಪಥ್ ಯೋಜನೆಯ ಕಾಯ್ದೆಯಡಿ ಅಗ್ನಿವೀರರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತಿದೆ. ೪ ವರ್ಷಗಳ ನಿಗಧಿತ ಒಪ್ಪಂದದ ಅವಧಿಯನ್ನು ಮೀರಿ ಅಗ್ನಿವೀರರನ್ನು ಮುಂದುವರೆಸುವುದಿಲ್ಲ ಎನ್ನುವುದು ಅಗ್ನಿಪಥ್ ಯೋಜನೆಯ ಕಾಯ್ದೆಯಾಗಿದೆ. ಇದರಿಂದಾಗಿ ಸೇನಾ ಆಕಾಂಕ್ಷಿಗಳಾದ ಯುವಕರು ತೀವ್ರ ಅಸಮಾಧಾನಗೊಂಡು ಈ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಇವರಿಗೆ ಬೆಂಬಲಿಸಿ ಈ ಯೋಜನೆಯನ್ನು ಹಿಂಪಡೆಯಬೇಕೆಂದು ಧರಣಿ ನಿರತರು ಆಗ್ರಹಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸಲಾಗದೆ ಅಗ್ನಿಪಥ್ ಯೋಜನೆಯ ಮೂಲಕ ಯುವಕರನ್ನು ಅದರಲ್ಲೂ ಸೇನಾ ಆಕಾಂಕ್ಷಿಗಳನ್ನು ಬೀದಿಗೆ ತಂದು ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಈ ಯೋಜನೆ ದೇಶದ ಭದ್ರತೆ ಮತ್ತು ಯುವಕರ ಭವಿಷ್ಯಕ್ಕೆ ಮಾರಕವಾಗಿರುವುದರಿಂದ ಈ ಯೋಜನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಈ ಯೋಜನೆಯಡಿಯಲ್ಲಿ ಯುವಕರನ್ನು ಸೇನೆಯ ಸಶಸ್ತ್ರ ಪಡೆಗಳಿಗೆ ನೇಮಕ ಮಾಡುವ ಅಧಿಸೂಚನೆಯ ಪ್ರಕ್ರಿಯೆಯನ್ನು ತಕ್ಷಣ ರದ್ದುಪಡಿಸಬೇಕು. ಈ ಯೋಜನೆಯನ್ನು ಮರುಪರಿಶೀಲನೆಗಾಗಿ ಒಂದು ಸಮಿತಿಯನ್ನು ರಚನೆ ಮಾಡಬೇಕು ಮತ್ತು ಈ ಯೋಜನೆಯ ಬಗ್ಗೆ ನಿವೃತ್ತ ಸೇನಾಧಿಕಾರಿಗಳಿಂದ ಉದ್ಯೋಗಾವಕಾಶ ಸೃಷ್ಟಿಸುವ ಬಗ್ಗೆ ಮತ್ತು ಅವರ ಸೇವಾವಧಿ ಬಗ್ಗೆ ಸಂಪೂರ್ಣ ರಕ್ಷಣೆ ಒದಗಿಸುವ ಬಗ್ಗೆ ಸೂಕ್ತ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದರು.
ಈ ಯೋಜನೆಯಲ್ಲಿ ನೇಮಕವಾಗುವ ವ್ಯಕ್ತಿಗೆ ೪ ವರ್ಷದ ಬಳಿಕ ಅಗ್ನಿವೀರರ ಭವಿಷ್ಯವೇನು? ಭದ್ರತೆಯೇನು? ಈ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಯುವ ಜನತೆಯಲ್ಲಿರುವ ಉದ್ಯೋಗದ ಅಭದ್ರತೆಯ ಭಾವನೆ ಬಳಸಿಕೊಂಡು ಯುವಜನರ ಜೀವನವನ್ನು ಹಾಳುಮಾಡಲು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಬಿಜೆಪಿ ಸರ್ಕಾರ ತೋರಿಸುತ್ತಿರುವ ಉತ್ಸಾಹದಲ್ಲಿ ಅಗ್ನಿವೀರರ ಭವಿಷ್ಯದ ಪ್ರಗತಿಯನ್ನು ನಿರ್ಲಕ್ಷಿಸಲಾಗಿದೆ. ಸುರಕ್ಷತೆಯ ಸೇನೆ ಇಲ್ಲದೆ ಅಲ್ಪಾವಧಿಯ ಸೇನಾ ನೇಮಕಾತಿ ದೇಶದ ರಕ್ಷಣೆಗೆ ಅಪಾಯತರುವ ಪರಿಸ್ಥಿತಿ ಉಂಟಾಗುವುದರಿಂದ ಕೂಡಲೇ ಈ ಯೋಜನೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಅಗ್ನಿವೀರರನ್ನು ಅತಂತ್ರ ಸ್ಥಿತಿಗೆ ತಲುಪಿಸುವ ವಿವಾದಾತ್ಮಕ ಹಾಗೂ ಹಲವು ಅಪಾಯಗಳನ್ನು ಒಳಗೊಂಡಿರುವ ಜೈಜವಾನ್ ಮೌಲ್ಯಗಳಿಗೆ ಅವಮಾನ ಮಾಡುವ ದಿಕ್ಕುದೆಸೆಯಿಲ್ಲದ ಅಗ್ನಿಪಥ್ ಯೋಜನೆಯನ್ನು ತಕ್ಷಣ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಪ್ರಮುಖರಾದ ರಮೇಶ್ ಶಂಕರಘಟ್ಟ, ಎಸ್.ಕೃಷ್ಣ, ಕೆ. ದೇವೇಂದ್ರಪ್ಪ, ಇಸ್ಮಾಯಿಲ್ ಖಾನ್, ಕೃಷ್ಣಪ್ಪ, ವಿಜಯಲಕ್ಷ್ಮೀ ಪಾಟೀಲ್, ಎಲ್. ರಾಮೇಗೌಡ, ಇಕ್ಕೇರಿ ರಮೇಶ್, ಸ್ಟೆಲ್ಲಾ ಮಾರ್ಟಿನ್, ಪ್ರೇಮಾ, ನಾಜೀಮಾ, ಜಿ.ಡಿ. ಮಂಜುನಾಥ್, ಸೈಯದ್ ವಾಹಿದ್ ಅಡ್ಡು, ಆರೀಫ್, ಚಂದ್ರಕಲಾ, ಸುವರ್ಣ ನಾಗರಾಜ್, ಶೋಭಾ, ಇಕ್ಬಲ್ ನೇತಾಜಿ, ಚಂದ್ರಶೇಖರ್, ಸಿ.ಎಸ್. ಚಂದ್ರಭೂಪಾಲ, ಚಂದನ್, ಎನ್.ಡಿ. ಪ್ರವೀಣ್ ಮತ್ತಿತರರಿದ್ದರು.