ಶಿವಮೊಗ್ಗ,ಆ.೧೫: ದೇಶದ ಸ್ವಾತಂತ್ರ್ಯ ಗಳಿಸಿದ್ದು ಲಕ್ಷಾಂತರ ದೇಶಭಕ್ತರ ತ್ಯಾಗ. ಬಲಿದಾನದಿಂದ ಎಂಬುದನ್ನು ಇಂದಿನ ಯುವ ಜನತೆ ಮರೆಯಬಾರದು. ದೇಶ ಭಕ್ತಿಯು ಕೇವಲ ಒಂದು ದಿನದ ಆಚರಣೆಗೆ ಸೀಮೀತವಾಗಬಾರದು ಪ್ರತಿನಿತ್ಯ ರಾಷ್ಟ್ರದ ಹಿತಕ್ಕಾಗಿ ಶ್ರಮಿಸಬೇಕು ಎಂದು ಸಾಗರ ತಾಲೂಕು ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿಗಳಾದ ಡಾ.ಎಸ್.ರಾಮಪ್ಪ ಹೇಳಿದರು.
ಸಿಗಂದೂರು ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ದೇಶಕ್ಕೆ ಮುಕ್ತಕೊಡಿಸಿದ ಹೋರಾಟದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಬೇಕಿದೆ. ಈ ನೆಲೆಯಲ್ಲಿ ಸಂಘಸಂಸ್ಥೆಗಳು ಮತ್ತು ಸರಕಾರ ಕಾರ್ಯೋನ್ಮುಖವಾಗಬೇಕು ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಸುತ್ತಲ ಗ್ರಾಮಸ್ಥರು ಮತ್ತು ಭಕ್ತರು ಅಮೃತಮಹೋತ್ಸವದಲ್ಲಿ ಭಾಗಿಯಾಗಿದ್ದರು.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ದೇವಾಲಯದ ಸುತ್ತ ಮುತ್ತ ಸ್ವಚ್ಛ ಗೊಳಿಸಿ. ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿ ಹಲವು ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಸಿಗಂದೂರು ಚೌಡೇಶ್ವರಿ ದೇವಿಗೆ ಸಹ ವಿಶೇಷ ಅಲಂಕಾರ ಮಾಡಲಾಗಿತ್ತು ಪ್ರಥಮ ಪೂಜೆಯಲ್ಲಿ ಧರ್ಮಾಧಿಕಾರಿ ಡಾ. ರಾಮಪ್ಪ ಅವರು ಲೋಕಕಲ್ಯಾಣಾರ್ಥವಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ ಆರ್, ವ್ಯವಸ್ಥಾಪಕ ಪ್ರಕಾಶ, ಸಂದೀಪ, ನಾರಾಯಣ ಗುರು ವಿಚಾರ ವೇದಿಕೆ ತಾಲ್ಲೂಕು ಉಪಾಧ್ಯಕ್ಷ ಗಣೇಶ ಜಾಕಿ ತುಮರಿ, ಅಣ್ಣಪ್ಪ ಆಚಾರ್ಯ, ಮಹೇಶ, ಮನೋಜ್ ಸತೀಶ. ರಾಘವೇಂದ್ರ ಬಿ. ಸಿ ಮತ್ತು ಸಿಬ್ಬಂದಿಗಳು ,ಭಕ್ತವೃಂದ ಹಾಜರಿತ್ತು.
previous post